ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 600 ಇಂದಿರಾ ಕ್ಯಾಂಟೀನ್ಗಳು ತಲೆ ಎತ್ತಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಿಬಿಎಂಪಿ ವತಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.
ವಿಮಾನನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಬೇಕೆಂದು ಟ್ಯಾಕ್ಸಿ ಚಾಲಕರು ಹಾಗೂ ಇತರೆ ಚಾಲಕರ ಬೇಡಿಕೆಯಂತೆ 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಪೈಕಿ ಈಗಾಗಲೇ 40 ಸಿದ್ದವಾಗಿದ್ದು, ಉಳಿದ್ದು ಸಿದ್ದಗೊಳ್ಳುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಅಗತ್ಯವಿತ್ತು. ಅದಕ್ಕಾಗಿ ಈಗಾಗಲೇ ಒಂದು ಉದ್ಘಾಟಿಸಲಾಗಿದೆ ಎಂದರು.
ಬಡವರಿಗೆ ಕಡಿಮೆ ದರಗಳಲ್ಲಿ ಊಟ ತಿಂಡಿ ದೊರೆಯಬೇಕೆನ್ನುವುದು ಇದರ ಉದ್ದೇಶ. ಬೆಳಗಿನ ಉಪಾಹಾರ 5 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟ 10. ರೂ.ಗಳಿಗೆ ದೊರಕಲಿದೆ. ಬಡವರು ಊಟ ಮಾಡಬೇಕೆಂಬ ಕಾರಣಕ್ಕೆ ನಾವು ಪುನ: ಪ್ರಾರಂಭಿಸಿದ್ದೇವೆ ಎಂದರು. ಬೆಂಗಳೂರಿನ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೇ ನೀಡಿದ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕೂಡ 2-3 ಸಭೆಗಳನ್ನು ನಡೆಸಿದ್ದು, ಎಷ್ಟೇ ಹಣ ವೆಚ್ಚವಾದರೂ ಟ್ಯಾಂಕರ್ ಹೊಸ ಕೊಳವೆಬಾವಿಗಳಿರಬಹುದು ಅಥವಾ ಕಾವೇರಿ ನೀರನ್ನಾದರೂ ಕೊಡುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.