ರಾಜ್ಯದಲ್ಲಿ ದಲಿತ ಸಿ.ಎಂ ಮಾಡಲು ಕಾಲ ಕೂಡಿ ಬಂದಿಲ್ಲ : ಸತೀಶ್ ಜಾರಕಿಹೊಳಿ

ಕಾರವಾರ : ರಾಜ್ಯದಲ್ಲಿ ದಲಿತ ಸಿ.ಎಂ ಮಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ ಕಾಲ ಬಂದಾಗ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣಕ್ಕೆ ಕಾರ್ಯಕ್ರಮದ ನಿಮಿತ್ತ ಆಗಮಿಸಿ ಮಾಧ್ಯಮಗಳೊಂದಿಗೆ ಸತೀಶ್ ಜಾರಕಿಹೊಳಿ ಮಾತನಾಡುತ್ತಿದ್ದರು. ದಲಿತ ಸಿ.ಎಂ ಮಾಡುವ ಬಗ್ಗೆ ಪಕ್ಷಕ್ಕೆ ನಮ್ಮ ನಿರ್ಧಾರ ಹೇಳಬಹುದು ಅಷ್ಟೇ. ನಿರ್ಧಾರ ಹೈಕಮಾಂಡ್ ಮಾಡಬೇಕು. ಸದ್ಯಕ್ಕೆ ದಲಿತ ಸಿ.ಎಂ ಯೋಚನೆ ಪಕ್ಷದಲ್ಲಿ ಇಲ್ಲ. ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಸಿ.ಎಂ ಆಗಲು ಅವಕಾಶವಿದೆ. ದಲಿತ, ಆ ಜಾತಿ ಈ ಜಾತಿ ಎಂಬ ಭೇದ ಭಾವವಿಲ್ಲ. ನನಗೆ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿಸಿದರು.

ಬಿ.ಕೆ.ಹರಿಪ್ರಸಾದ್ ಅವರನ್ನು ಪಕ್ಷ ಕಡೆಗಣಿಸಿದ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಪಕ್ಷ ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ, ಅವರನ್ನು ಯಾರೂ ಕೆಳಗಿಳಿಸುವ ಪ್ರಶ್ನೆ ಇಲ್ಲ, ನಾವು ಅವರ ಜೊತೆ ಚರ್ಚೆ ಮಾಡಿದ್ದೇವೆ. ಬಹಳಷ್ಟು ಹಿರಿಯ ನಾಯಕರಿಗೆ ಸ್ಥಾನ ನೀಡಿಲ್ಲ, ಅವಕಾಶ ಬಂದಾಗ ಅವರಿಗೆ ಪಕ್ಷ ಸ್ಥಾನಮಾನ ನೀಡಲಿದೆ. ನಿಗಮ ಮಂಡಳಿಗೆ 25 ಜನ ಶಾಸಕರಿಗೆ ಸ್ಥಾನ ನೀಡುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಇನ್ನಷ್ಟು ಜನರಿಗೆ ನೀಡುತ್ತಾರೆ, ಎಲ್ಲರಿಗೂ ಸಮಾಧಾನ ಮಾಡಲು ಅವಕಾಶ ಇದೆ, ಅಸಮಾಧಾನ ಆಗುವ ಪ್ರಶ್ನೆ ಇಲ್ಲವೇ ಇಲ್ಲ ಎಂದರು. ಗುತ್ತಿಗೆದಾರರಿಗೆ ಪ್ರಾಮುಖ್ಯತೆ ಮೇಲೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಹಿಂದಿನ ಸರ್ಕಾರ ಅನುದಾನಕ್ಕಿಂತ ಹೆಚ್ಚಿಗೆ ಕಾಮಗಾರಿ ಮಂಜೂರು ಮಾಡಿದ್ದರಿಂದ ಸಮಸ್ಯೆಯಾಗಿದೆ. ಸಾವಿರದ ಐವತ್ತೈದು ಕೋಟಿ ಅನುದಾನ ಇರುವುದು ಹಿಂದಿನ ಸರ್ಕಾರ ಎರಡು ಪಟ್ಟು ಜಾಸ್ತಿ ನೀಡಿದ್ದಾರೆ. ಅದನ್ನು ಬೇಗ ಕೊಡಲು ಪ್ರಯತ್ನ ಮಾಡುತ್ತೇವೆ ಎಂದರು. ಇನ್ನು ಈಶ್ವರಪ್ಪನವರ ರಕ್ತ ಮಾತ್ರ ಅಲ್ಲ ಎಲ್ಲರ ರಕ್ತವೂ ಹಿಂದುಗಳದ್ದು ಎಂದು ಈಶ್ವರಪ್ಪನವರ ಹೇಳಿಕೆಗೆ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.




