Wednesday, January 28, 2026
24.9 C
Bengaluru
Google search engine
LIVE
ಮನೆ#Exclusive Newsರಾಜ್ಯಕ್ಕೆ ಪ್ರತ್ಯೇಕ ಧ್ವಜ: ಅರ್ಜಿ ವಜಾ

ರಾಜ್ಯಕ್ಕೆ ಪ್ರತ್ಯೇಕ ಧ್ವಜ: ಅರ್ಜಿ ವಜಾ

ಬೆಂಗಳೂರು: ಕರ್ನಾಟಕವು ಪ್ರತ್ಯೇಕ ಧ್ವಜ ಹೊಂದಲು ರಾಜ್ಯ ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಪ್ರತ್ಯೇಕ ನಾಡ ಧ್ವಜ ಹೊಂದುವ ವಿಚಾರವು ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಒಳಪಡುವುದಿಲ್ಲ. ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣಾ ಮಾನ್ಯತೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ತಿಳಿಸಿ ಅರ್ಜಿ ವಜಾ ಮಾಡಿದೆ. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರು ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸರ್ಕಾರವು ಹಿಂದಿನ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರ ಅಭಿಪ್ರಾಯ ಆಧರಿಸಿ ಪ್ರತ್ಯೇಕ ದ್ವಜಕ್ಕೆ ಕಾನೂನಿನ ಮಾನ್ಯತೆ ಹಾಗೂ ಧ್ವಜದ ವಿನ್ಯಾಸದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಾಹಿತಿ ಹಾಗೂ ಹೋರಾಟಗಾರರನ್ನು ಒಳಗೊಂಡ ಒಂಭತ್ತು ಸದಸ್ಯರ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ವರದಿ ನೀಡಿದ್ದು, ಅದನ್ನು ರಾಜ್ಯ ಸಚಿವ ಸಂಪುಟ ಒಪ್ಪಿದೆ ಎಂದು ವಿವರಿಸಿದರು. ಅಲ್ಲದೆ, ಸಮಿತಿಯು ನೀಡಿದ ವರದಿ ಆಧರಿಸಿ 2018ರ ಮಾರ್ಚ್ 8ರಂದು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ ನಡುವೆ ಗಂಡಭೇರುಂಡ ಚಿಹ್ನೆ ಹೊಂದಿರುವ ಧ್ವಜವನ್ನು ಅಂದಿನ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು. ಅದನ್ನು ರಾಜ್ಯದ ಧ್ವಜ ಎಂದಿದ್ದರು. ಆ ನಂತರ ಯಾವುದೇ ಬೆಳವಣಿಗೆಯಾಗಲಿಲ್ಲ. ನಮ್ಮದು ಒಕ್ಕೂಟ ದೇಶವಾಗಿದೆ. ಪ್ರತಿ ರಾಜ್ಯವೂ ತನ್ನದೇ ಆದ ಧ್ವಜ ಹೊಂದುವ ಹಕ್ಕು ಹೊಂದಿದೆ. ಕರ್ನಾಟಕವು ತನ್ನದೇ ಆದ ಧ್ವಜ ಹೊಂದಬೇಕು ಎಂಬ ಕೂಗು ಇದೆ. ಈಗ ರಾಜ್ಯದ ಒಂದೊಂದು ಕಡೆ ಒಂದೊಂದು ಧ್ವಜಾರೋಹಣ ಮಾಡಲಾಗುತ್ತಿದೆ. ಇದರಿಂದ ಗೊಂದಲ ಇದೆ. ಪ್ರತ್ಯೇಕ ಧ್ವಜ ಹೊಂದಲು ರಾಜ್ಯ ಸರ್ಕಾರ ಬೆಂಬಲ ಸೂಚಿಸಿದೆ. ನ್ಯಾಯಾಲಯ ನಿರ್ದೇಶನ ನೀಡದ ಹೊರತು ರಾಜ್ಯ ಸರ್ಕಾರವು ಕಾರ್ಯೋನ್ಮುಖವಾಗುವುದಿಲ್ಲ. ದಯಮಾಡಿ ಸಾರ್ವಜನಿಕರ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಜನರು ನ್ಯಾಯಾಂಗದ ಮೇಲಿನ ಭರವಸೆ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಮನವಿ ಒಪ್ಪದ ನ್ಯಾಯಪೀಠವು, ನಿಮ್ಮ ಬಾವುಟ ನೀವು ಹಾರಿಸಿದ್ದೀರಿ. ನಾವು ನಮ್ಮ ಆದೇಶ ಮಾಡಿದ್ದೇವೆ ಎಂದು ನುಡಿದು ಅರ್ಜಿ ವಜಾಗೊಳಿಸಿತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments