
ಹಾಸನ: ಸಕಲೇಶಪುರದ ಮೂಗಲಿ ಗ್ರಾಮದ ಬಳಿ ಶೋಭ ಎಂಬ ಮಹಿಳೆಯನ್ನು ಬಲಿ ಪಡೆದಿದ್ದ ಕಾಡಾನೆಯನ್ನ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ..
ಕಳೆದ ಎರಡು ವಾರಗಳ ಹಿಂದೆ ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ಬಂದಿದ್ದ ಕಾಡಾನೆ ಶೋಭ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಆ ನಂತರ ಸಿಕ್ಕಸಿಕ್ಕವರ ಮೇಲೆ ದಾಳಿಗೆ ಮುಂದಾಗಿ ಆತಂಕ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಜನವರಿ 14 ರಂದು ಕಾಡಾನೆ ಸೆರೆ ಕಾರ್ಯಾಚರಣೆಗೆ ಅರಣ್ಯ ಸಚಿವರು ಅನುಮತಿ ನೀಡಿದ್ದರು.
ಬಳಿಕ ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರದಿಂದ ಧನಂಜಯ, ಸುಗ್ರೀವ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಸೇರಿ ಐದು ಕುಮ್ಕಿ ಆನೆಗಳು ಆಲೂರು ತಾಲ್ಲೂಕಿನ ಭೈರಾಪುರ ಬಳಿಯಿರುವ ತಾತ್ಕಾಲಿಕ ಶಿಬಿರಕ್ಕೆ ಆಗಮಿಸಿದ್ದವು. ಜ.16ರ ಬೆಳಿಗ್ಗೆಯೇ ಇಟಿಎಫ್ ಸಿಬ್ಬಂದಿ ಪುಂಡಾನೆ ಟ್ರ್ಯಾಕ್ ಮಾಡಲು ತೆರಳಿದ್ದರು. ಮಧ್ಯಾಹ್ನ ಆದರೂ ಕಾಡಾನೆ ಸುಳಿವು ಸಿಗದ ಹಿನ್ನೆಲೆ ಡ್ರೋನ್ ಹಾರಿಸಿ ಕಾಡಾನೆ ಇರುವ ಜಾಗವನ್ನು ಪತ್ತೆ ಮಾಡಲಾಗಿತ್ತು.
ಸತತ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ, ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು. ಪುಂಡಾನೆ ಸೆರೆ ಹಿಡಿದಿದ್ದರಿಂದ ಮಲೆನಾಡು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.


