ಬೆಂಗಳೂರು : ಕರ್ನಾಟಕದಲ್ಲಿ ಭ್ರೂಣ ಮತ್ತೆ ಹಾಗೂ ಹತ್ಯೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಬೆಂಗಳೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ಎಗ್ಗಿಲ್ಲದೇ ಈ ದಂಧೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಈ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಇನ್ನು ರಾಜ್ಯದಲ್ಲಿ ಭ್ರೂಣಹತ್ಯೆ ತಡೆಗೆ ಪೊಲೀಸ್ ಇಲಾಖೆ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ಮುಂದೆ 6 ತಿಂಗಳು ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಕೊಲೆ ಕೇಸ್ ದಾಖಲಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಭ್ರೂಣ ಹತ್ಯೆ ಮಾಡಿದ್ರೆ ಐಪಿಸಿ 302 ಅಡಿ ಕೇಸ್ ದಾಖಲಿಸಿಕೊಳ್ಳಲು ಚಿಂತನೆಗಳು ನಡೆದಿದ್ದು, ಈ ಹೊಸ ನಿಯಮ ಜಾರಿಗೆ ತರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲು ಮಾಡಲು ಕರಡು ತಯಾರಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಕರಡು ಸಿದ್ದಪಡಿಸಿ ಜಾರಿಗೆ ತರುವಂತೆ ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ.
ಒಂದು ವೇಳೆ ಇದು ಜಾರಿಗೆ ಬಂದರೆ ಆರು ತಿಂಗಳು ಮತ್ತು ನಂತರದ ಭ್ರೂಣ ಹತ್ಯೆ ಮಾಡಿದರೆ ಅಂತರವರ ವಿರುದ್ಧ ಐಪಿಸಿ 302 ಅಡಿಯಲ್ಲಿ ಕೇಸ್ ದಾಖಲಾಗಲಿದೆ. ಈ ಮೂಲಕ ಭ್ರೂಣ ಹತ್ಯೆ ತಡೆಗಟ್ಟಲು ಪೊಲೀಸ್ ಇಲಾಖೆ ಈ ರೀತಿಯಾಗಿ ಮುಂದಾಗಿದೆ. ಆದ್ರೆ, ಈ ಬಗ್ಗೆ ಗೃಹ ಸಚಿವರು ಅಥವಾ ಆರೋಗ್ಯ ಇಲಾಖೆ ಸಚಿವರು ಇದುವರೆಗೂ ಯಾವುದೇ ಪ್ರತಿಕ್ರಿಯಿಯೆ ನೀಡಿಲ್ಲ.