ನವದೆಹಲಿ: ಯುನೈಟೆಡ್ ಸ್ಟೇಟ್ಸ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾರೀ ಮುನ್ನಡೆ ಸಾಧಿಸುವ ಮೂಲಕ ಗೆಲುವನ್ನು ಖಾತರಿಪಡಿಸಿಕೊಂಡಿದ್ದಾರೆ. ಈ ನಡುವೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕಳೆದ 5 ಅಧ್ಯಕ್ಷೀಯ ಅವಧಿಗಳಲ್ಲಿ ಭಾರತವು ಯುನೈಟೆಡ್ ಸ್ಟೇಟ್ನೊಂದಿಗಿನ ತನ್ನ ಸಂಬಂಧದಲ್ಲಿ ಸ್ಥಿರವಾದ ಪ್ರಗತಿಯನ್ನು ಕಂಡಿದೆ. ಚುನಾವಣೆಯ ಬಳಿಕ ಅಮೆರಿಕದೊಂದಿಗಿನ ಭಾರತದ ಸಂಬಂಧವು ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದ್ದಾರೆ.
ಕ್ಯಾನ್ಬೆರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕನ್ನರು ಇನ್ನೂ ಮತ ಚಲಾಯಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಭಾರತದ ಕೇಂದ್ರ ಸಚಿವ ಜೈಶಂಕರ್, ಅಮೆರಿಕದೊಂದಿಗೆ ಭಾರತದ ಸಂಬಂಧ ಭವಿಷ್ಯದಲ್ಲಿ ಇನ್ನೂ ಬೆಳೆಯಲಿದೆ ಎಂದು ಹೇಳಿದ್ದಾರೆ. ಕ್ಯಾನ್ಬೆರಾದಲ್ಲಿ ಆಸ್ಟ್ರೇಲಿಯಾದ ಸಹವರ್ತಿ ಪೆನ್ನಿ ವಾಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಜೈಶಂಕರ್ ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ಗಳನ್ನು ಒಳಗೊಂಡಿರುವ ಕ್ವಾಡ್ನ ಭವಿಷ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.