ಬೆಂಗಳೂರು : ನಗರದ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಕನ್ನಡಿಗ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹಲ್ಲೆ ಮಾಡಿದ ಕಮಾಂಡರ್ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನವನ್ನು ಮೆರೆದಿದ್ದಾನೆ.
ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..
ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ ಇದೆ ಎಂದು ಸಿಎಂ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ.
ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ.
ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ.