ಬೆಂಗಳೂರು: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಸುದ್ದಿ ಅರಿಯುತ್ತಲೇ ಸ್ಥಳಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ದೌಡಾಯಿಸಿದರು.
ಸ್ಥಳದಲ್ಲಿದ್ದ ಕೆಂಪೇಗೌಡ ಬಡಾವಣೆಯ ನಾಗರಿಕರೊಂದಿಗೆ ಚರ್ಚಿಸಿದ ಬಿಡಬ್ಲ್ಯೂಎಸ್ಎಸ್ಬಿಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸಿದರು;ಇನ್ಮುಂದೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ ಬಿಡಬ್ಲ್ಯೂಎಸ್ಎಸ್ಬಿ ಮುಖ್ಯ ಎಂಜನಿಯರ್ ಅವರು ತಮ್ಮ ಅಧಿಕಾರಿಗಳ ತಂಡದೊಂದಿಗೆ ಭಾರತಿನಗರಕ್ಕೆ ಭೇಟಿ ನೀಡಿ ಕುಡಿಯುವ ನೀರು ಸರಬರಾಜುವಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
ನೀರು ಸರಬರಾಜಾಗುವ ಪೈಪ್ ಲೈನ್ ವ್ಯವಸ್ಥೆ ಹಾಗೂ ಸುಗಮ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನಿತ್ಯ ಯಾವುದೇ ರೀತಿಯ ಸಮಸ್ಯೆಯಾಗಂತೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಚನೆ ನೀಡಿದರು.
ಅಂಬೇಡ್ಕರ್ ನಗರಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು:
ನಾಯಂಡಹಳ್ಳಿಯ ಪಂತರ್ ಪಾಳ್ಯದ ಅಂಬೇಡ್ಕರ್ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವವಾಗಿರುವುದನ್ನು ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಗರಿಕರೊಂದಿಗೆ ಚರ್ಚಿಸಿದರು. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರು.
ನೀರಿನ ಸಮಸ್ಯೆ ನಿವಾರಣೆಯಾಗುವವರೆಗೆ ಬಡಾವಣೆಗೆ ನಿತ್ಯ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಅಶ್ವಾಸನೆ ನೀಡಿದರು.
ಜ್ಞಾನಭಾರತಿ ಬಳಿ ನೀರು ಸರಬರಾಜು ಪೈಪ್ ಗೆ ಹಾನಿ: ದುರಸ್ಥಿ: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಳಿ ಕುಡಿಯುವ ನೀರು ಸರಬರಾಜು ಮಾಡುವ ಒಂದು ಸಾವಿರ ಎಂಎಂ ವ್ಯಾಸದ ಪೈಪ್ ಲೈನ್ ಗುರುವಾರ ಬೆಳಗ್ಗೆ ಹಾನಿಯಾಗಿತ್ತು.
ಹಾನಿಯಾಗಿರುವುದು ಗೊತ್ತಾಗುತ್ತಲೇ ಸ್ಥಳಕ್ಕೆ ತೆರಳಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಕಾರ್ಮಿಕರೊಡಗೂಡಿ ನಿರಂತರ ನಾಲ್ಕುಗಂಟೆಗಳ ಕಾಲ ಸದರಿ ಪೈಪ್ ಅನ್ನು ದುರಸ್ತಿಗೊಳಿಸಿದರು. ಈ ಮೂಲಕ ರಾಜರಾಜೇಶ್ವರಿ ನಗರಕ್ಕೆ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ
ನಿರಂತರ ನೀರು ಸರಬರಾಜು ಮಾಡುವಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು.
—
ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ ಗಳನ್ನು ಸ್ಥಾಪಿಸಿ, ಅವುಗಳಿಗೆ ಜಲಮಂಡಳಿ ಸಹಯೋಗದೊಂದಿಗೆ ಟ್ಯಾಂಕರ್ ಗಳಿಂದ ಕುಡಿಯುವ ನೀರು ತುಂಬಿಸುವ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ ಬರುವ 110 ಹಳ್ಳಿಗಳಿಗೆ ಮಾತ್ರ ಪಾಲಿಕೆಯ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ನೀರಿನ ಸಮಸ್ಯೆಯ ಕುರಿತು ಮಾಹಿತಿ ನೀಡಲು ಕೋರಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುವುದು.
ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉಳಿದೆಲ್ಲಾ ವಾರ್ಡ್ ಗಳಿಗೆ ಸಂಬಂಧಿಸಿದಂತೆ ಜಲಮಂಡಳಿಯ(BWSSB) ಸಹಾಯವಾಣಿ ಸಂಖ್ಯೆಯಾದ 1916ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದ್ದು, ತ್ವರಿತವಾಗಿ ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುವುದು.