Freedom TV

ಬೆಂಗಳೂರಿನಲ್ಲಿ IPL ಪಂದ್ಯಗಳು ನಡೆಯಲ್ವಾ?

ಬೆಂಗಳೂರು; ರಾಜ್ಯ ಎಂದೂ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ.ಎಲ್ಲೆಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ​ ಪಂದ್ಯಾವಳಿಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವಂತೆ ನೆಟ್ಟಿಗರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಅಭಿಯಾನವೊಂದು ಕೂಡ ಶುರುವಾಗಿದೆ.

ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಕಳುಹಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಅವುಗಳೆಂದರೆ, ಮಾರ್ಚ್ 25 ರಂದು ಆತಿಥೇಯ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ನಂತರ ಎರಡನೇ ಪಂದ್ಯವನ್ನು ಮಾರ್ಚ್ 9 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮತ್ತು ಮೂರನೇ ಪಂದ್ಯವನ್ನು ಏಪ್ರಿಲ್ 2 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಾಗುತ್ತದೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಕ್ರಿಕೆಟ್ ಪಿಚ್ ನಿರ್ವಹಣೆಗೆ ನಿತ್ಯ 15-20 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಮೂರು ಪಂದ್ಯಗಳಿಗೆ ಲೆಕ್ಕಾ ಹಾಕಿದರೆ ಇದು ದುಪ್ಪಟ್ಟಾಗುತ್ತದೆ. ಈಗಲೇ ಬೆಂಗಳೂರಿನ ಹಲವು ಕಡೆ ಜನರು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಕುಡಿಯಲು ಹೊರತಾಗಿ ನೀರನ್ನ ಬೇರೆ ಉದ್ದೇಶಕ್ಕೆ ಬಳಸಲು ಟ್ಯಾಂಕರ್‌ ಮೂಲಕ ಖರೀದಿಸಿದರೆ ಬೆಂಗಳೂರು ಜಲಮಂಡಳಿ 5000 ರೂ ದಂಡ ವಿಧಿಸಲು ತೀರ್ಮಾನಿಸಿದೆ. ಇಷ್ಟೆಲ್ಲಾ ಸಮಸ್ಯೆಗಳು ಇರುವುವಾಗ ಐಪಿಎಲ್‌ ಬೆಂಗಳೂರಿನಲ್ಲಿ ನಡೆಯಲು ಸಾಧ್ಯವೇ ಎನ್ನುವಂಥ ಚರ್ಚೆ ಶುರುವಾಗಿದೆ.ಪಂದ್ಯಗಳು ನಡೆಸಿದರೆ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದೆ. ಹೀಗಾಗಿ ಇಲ್ಲಿನ ಪಂದ್ಯಗಳನ್ನು ಬೇರೆ ಕಡೆ ನಡೆಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಕೆಲ ನೆಟ್ಟಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹ್ಯಾಶ್​ ಟ್ಯಾಗ್​ ಮಾಡಿ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button