ಈ ಹಿಂದೆ ಕೆರೆಯ ನೀರೇ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಬಳಕೆ ಮಾಡುತ್ತಿದ್ದರು. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಕೆರೆಯ ನೀರು ಬಳಸದೇ ಇರುವಷ್ಟು ರಾಜಕಾಲುವೆ ನೀರಿನ ಜೊತೆ ಬೆರೆತು ಹೋಗಿದೆ. ಇದೀಗ ಇದೇ ಬತ್ತಿ ಹೋದ ಕೆರೆಯ ಅಂಗಳದ ನೀರನ್ನು ಶುದ್ಧೀಕರಿಸಿ ಬಳಸಲು ಜಲಮಂಡಳಿ ಹೊಸ ಪ್ಲಾನ್ ರೂಪಿಸಿದೆ.
ಬೆಂಗಳೂರಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಮಂಡಳಿ ಕೆರೆಗಳ ಮೊರೆ ಹೋಗಿದೆ. ಐಐಎಸ್ಸಿ ಸಹಯೋಗದಲ್ಲಿ ಬೆಂಗಳೂರಿನ ಎಂಟು ಕೆರೆಗಳಲ್ಲಿ ಫಿಲ್ಟರ್ ಬೋರ್ ವೆಲ್ ಅಳವಡಿಸಲು ತಯಾರಿ ನಡೆಸಿದೆ. ಹೌದು. ದೇವನಹಳ್ಳಿಯಲ್ಲಿ ಕೆರೆಯಂಗಳದಲ್ಲಿ IISC ಫಿಲ್ಟರ್ ಬೋರ್‌ವೆಲ್ ಪ್ರಯೋಗ ಮಾಡ್ತಿದೆ. ನೀರು ಸಂಗ್ರಹಿಸಿ ಅದನ್ನು ಶುದ್ಧೀಕರಿಸಿ ಗುಣಮಟ್ಟದ ನೀರು ಪೂರೈಕೆ ಮಾಡಲಾಗುತ್ತಿದೆ. ಸದ್ಯ 40 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನ ಇತರ ಕೆರೆಗಳಲ್ಲಿಯೂ ಪ್ರಯೋಗ ಮಾಡಲು ಜಲಮಂಡಳಿ ಪ್ಲಾನ್ ಮಾಡಿದೆ.
ನಾಯಂಡಹಳ್ಳಿ ಕೆರೆ, ಚಿಕ್ಕಬಾಣಾವರ ಕೆರೆ, ವರ್ತೂರು ಕೆರೆ ಸೇರಿದಂತೆ ಏಳೆಂಟು ಕೆರೆಗಳನ್ನ ಫಿಲ್ಟರ್ ಬೋರ್‌ವೆಲ್ ಪ್ರಯೋಗಕ್ಕೆ ಗುರುತಿಸಲಾಗಿದೆ. ಜಲಮಂಡಳಿ ಅಧಿಕಾರಿಗಳು, ಜಲತಜ್ಞರು, ಐಐಎಸ್‌ಸಿ ವಿಜ್ಞಾನಿಗಳು ವಿವಿಧ ಕೆರೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ತಜ್ಞರು ನೀರಿನ ಗುಣಮಟ್ಟ ಪರಿಶೀಲಿಸಲಿದ್ದಾರೆ. ನೀರು ಕುಡಿಯಲು ಯೋಗ್ಯವೆಂದು ವರದಿ ಬಂದರೇ, ಬೋರ್ವೆಲ್ ಕೊರೆಯಲಾಗುತ್ತದೆ. ನಂತರ ನೀರು ಶುದ್ಧೀಕರಣ ಮಾಡಿ, ಬಳಿಕ ಮನೆ ಮನೆಗೆ ಸರಬರಾಜು ಮಾಡಲಾಗುತ್ತದೆ ಅಂತ ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ಒಳಗೆ ಈ ಕೆಲಸ ಆಗಲಿದೆ ಅಂದಿದ್ದಾರೆ
ಅಲ್ಲದೆ ಬೆಂಗಳೂರು ನಗರದ ಹೊರವಲಯದಲ್ಲಿ ಸರಿಯಾಗಿ ಕಾವೇರಿ ನೀರು ಪೂರೈಕೆಯಾಗ್ತಿಲ್ಲ. ಬಹುತೇಕ ಕಡೆ ಬೋರ್ ವೇಲ್ ನೀರೇ ಆಧಾರವಾಗಿದೆ. ಸದ್ಯ ಬೋರ್ ವೇಲ್ ಕೈಕೊಟ್ಟಿದ್ದು ಜನ ನೀರಿಗಾಗಿ ಪರದಾಡ್ತಿದ್ದಾರೆ. 110 ಹಳ್ಳಿಗಳಿಗೆ ಕಾವೇರಿ ಹಂತ–5ನೇ ಯೋಜನೆಯಡಿ ಮೇ ತಿಂಗಳಾಂತ್ಯಕ್ಕೆ ಕಾವೇರಿ ನೀರು ಪೂರೈಕೆಯಾಗಲಿದೆ. ಅಲ್ಲಿವರೆಗೆ ಆ ಪ್ರದೇಶಗಳಿಗೆ ನೀರು ಪೂರೈಸಲು ಫಿಲ್ಟರ್ ಬೋರ್‌ವೆಲ್ ವ್ಯವಸ್ಥೆ ಸಹಕಾರಿಯಾಗಲಿದೆ ಅನ್ನೋದು ಜಲಮಂಡಳಿ ಲೆಕ್ಕಾಚಾರ. ಆದ್ರೆ ಕೆರೆ ನೀರು ಕುಡಿಯಲು ಬಳಿಸಿದ್ರೆ ಅದೇನು ಆಗುತ್ತೆ ಗೊತ್ತಿಲ್ಲ.ಜಲಮಂಡಳಿ ಲೆಕ್ಕಾಚಾರ ಸಕ್ಸಸ್ ಆಗುತ್ತಾ ಅಥವಾ ಗಂಡಾಂತರ ತರುತ್ತಾ ಅನ್ನೋದು ಕಾದುನೋಡಬೇಕು.