ಬಿಜೆಪಿ ಹೈಕಮಾಂಡ್ ಅದ್ಯಾವ ಕ್ಷಣದಲ್ಲಿ ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಮೊದಲ ಪ್ರಕಟಿಸಿತೋ ಗೊತ್ತಿಲ್ಲ. ಬಿಜೆಪಿಯ ಘೋಷಿತ ಅಭ್ಯರ್ಥಿಗಳು ಒಬ್ಬೊಬ್ಬರೇ ಹಿಂದೆ ಸರಿಯತೊಡಗಿದ್ದಾರೆ. ಮೂರು ದಿನದಲ್ಲಿ ಮೂವರು ಅಭ್ಯರ್ಥಿಗಳು ಬಿಜೆಪಿಗೆ ಶಾಕ್ ನೀಡಿದ್ದಾರೆ.
ಮೂರು ದಿನಗಳ ಹಿಂದಷ್ಟೇ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿತ್ತು. ಇದಾದ ಮರು ದಿನವೇ ಪಶ್ಚಿಮ ಬಂಗಾಲದ ಅಸನ್ಸೋಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್ ದಿಢೀರ್ ಎಂದು ನಾನು ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ರು. ಕೆಲವು ಕಾರಣಗಳಿಂದ ನಾನು ಕಣಕ್ಕೆ ಇಳಿಯಲ್ಲ ಎಂದರು.
ಈ ಬೆನ್ನಲ್ಲೇ ಗುಜರಾತ್ ಬಿಜೆಪಿಯ ಪ್ರಭಾವಿ ನಾಯಕ ನಿತಿನ್ ಪಟೇಲ್ ಕೂಡ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿ ಬಿಜೆಪಿಗೆ ಶಾಕ್ ನೀಡಿದರು. ನಿತಿನ್ ಪಟೇಲ್ಗೆ ಬಿಜೆಪಿ ಹೈಕಮಾಂಡ್ ಮೆಹ್ಸಾನಾ ಕ್ಷೇತ್ರದ ಟಿಕೆಟ್ ನೀಡಿತ್ತು.
ಇದೀಗ ಉತ್ತರಪ್ರದೇಶದ ಬಾರಬಂಕಿ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಉಪೇಂದ್ರ ಸಿಂಗ್ ರಾವತ್ ಕೂಡ ಕಣದಿಂದ ಹಿಂದೆ ಸರಿದಿದ್ದಾರೆ.
ಉಪೇಂದ್ರ ಸಿಂಗ್ ರಾವತ್ ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಇದು ಎಐನಿಂದ ಸೃಷ್ಟಿಸಿದ ನಕಲಿ ವೀಡಿಯೋ.. ನಾನು ತಪ್ಪು ಮಾಡಿಲ್ಲ ಎಂದು ಸಾಬೀತು ಆಗೋವರೆಗೂ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಉಪೇಂದ್ರ ಸಿಂಗ್ ರಾವತ್ ಘೋಷಿಸಿದ್ದಾರೆ