ವಿಜಯಪುರ : ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಹಿಂದೂಫೈರ್ ಬ್ರ್ಯಾಂಡ್ ಗಳೆಂದು ಗುರುತಿಸಿಕೊಂಡಿರುವ ಬಿಜೆಪಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಹೈದ್ರಾಬಾದ್ ಗೋಶಾಮಹಲ್ ಶಾಸಕ ಟಿ.ರಾಜಾಸಿಂಗ್ ವಿರುದ್ದ ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಮಾ.4 ರಂದು ಜನತಾ ಸೇವಾ ಸಮಿತಿ ವತಿಯಿಂದ ಶಿವಾಜಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತೋತ್ಸವ ಸಮಾರಂಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಕೋಮುಸೌಹಾರ್ದತೆ ಕದಡಿಸುವಂತೆ ಒಂದು ಪ್ರತ್ಯೇಕ ಕೋಮಿನ ವಿರುದ್ಧ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದಾರೆಂದು ಆರೋಪಿಸಿ ನಗರದ ನಿವೃತ್ತ ಶಿಕ್ಷಕ ಅಬುಬಕರ್ ಕಂಬಾಗಿ ಎಂಬುವವರು ಇಬ್ಬರು ಶಾಸಕರ ವಿರುದ್ದ ದೂರು ದಾಖಲಿಸಿದ್ದಾರೆ. ದೂರಿನನ್ವಯ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಶಾಸಕರುಗಳ ವಿರುದ್ಧ ಕಲಂ, 153, 506, 504, 505(2) ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿದೆ.