Freedom TV

ಧಾರವಾಡ ಲೋಕ ಕೈ ಟಿಕೆಟ್, ರಜತ್ ಉಳ್ಳಾಗಡ್ಡಿಮಠಗೆ ಕನ್ಫರ್ಮ್ ಆಯ್ತಾ..?.

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿನ ಕಳೆದಂತೆ ಲೋಕ ಕದನ ಈಗ ಜೋರಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಫೈನಲ್‌ಗಾಗಿ ಈಗ ದೆಹಲಿ‌ ಮಟ್ಟದಲ್ಲಿ ಬಿಜೆಪಿ ಕಾಂಗ್ರೆಸ್ ತೀವ್ರ‌ ಕಸರತ್ತು ನಡೆಸಿವೆ. ಈಗಾಗಲೇ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರವಾದ ಪೈಪೋಟಿ ನಡೆಯುತ್ತಾ ಬಂದಿದೆ. ಆದರೆ ಈಗ ಕೈ ಪಕ್ಷದ ಧಾರವಾಡ ಲೋಕಸಭಾ ಟಿಕೆಟ್ ರಜತ್‌ಗೆ ಒಲಿಯು ಚಾನ್ಸ್ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಧಾರವಾಡ ಲೋಕ ಸಭಾ ಕ್ಷೇತ್ರದ ಎಂಟು ವಿಧಾನ‌ಸಭಾ ಕ್ಷೇತ್ರದಲ್ಲಿ ಯುವ ಮುಖಂಡ ಹಾಗೂ ಲಿಂಗಾಯತರಾಗಿರೋ ರಜತ್‌ ಕ್ಷೇತ್ರದಲ್ಲಿ‌ ಓಡಾಟ ಹೆಚ್ಚು ಮಾಡಿದ್ದಾರೆ. ಅಲ್ಲದೆ ದೆಹಲಿ ಮಟ್ಟದಲ್ಲಿ ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಟಿಕೆಟ್ ಆಕಾಂಕ್ಷಿಗಳ ಸಿಂಗಲ್ ನೇಮ್‌ ಲಿಸ್ಟ್‌ನ್ನು ಪಕ್ಷದ ಹೈಕಮಾಂಡ ನಾಯಕರ ಗಮನಕ್ಕೆ ತಂದಿದ್ದಾರೆ. ಇದರಲ್ಲಿ ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ಪೈಪೋಟಿಯಲ್ಲಿ ಲಿಂಗಾಯತ ಹಾಗೂ ಯುವ ಮುಖಂಡನಾಗಿ ಗುರುತಿಸಿಕೊಂಡಿರುವ ರಜತ್‌ ಮೊದನೇ‌ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಜೊತೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶೀವಲೀಲಾ ಕುಲಕರ್ಣಿ ಹೆಸರು ಕೇಳಿ ಬಂದಿತ್ತಾದರೂ ಈಗ ರಜತ್ ಹೆಸರು ಹೆಚ್ಚಾಗಿ ಮುನ್ನೆಲೆಗೆ ಬಂದಿದೆ‌ ಎಂದು ತಿಳಿದು ಬರುತ್ತಿದೆ.‌

ಕಾಂಗ್ರೆಸ್‌ನಿಂದ ಧಾರವಾಡ ಲೋಕಸಭಾ ಟಿಕೆಟ್‌ಗಾಗಿ 20ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅದರಲ್ಲಿ ಈಗ ಫಿಲ್ಟರ್ ಮಾಡಿ ಕೆಲವು ನಾಯಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನಂತರ ಪಕ್ಷದ ಆಂತರಿಕ ಸರ್ವೇ ನಡೆಸಿ, ಎರಡಂಕಿ ಹೆಸರನ್ನು ತೆಗೆದುಕೊಳ್ಳಲಾಗಿತ್ತು. ಶೀವಲೀಲಾ ಕುಲಕರ್ಣಿ ಹಾಗೂ ರಜತ್ ಹೆಸರುಗಳು ಹೆಚ್ಚಾಗಿ ಪೈಪೋಟಿ ಇದ್ದ ಕಾರಣ, ಈಗ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ‌ ಅಧ್ಯಕ್ಷ ಡಿಕೆ ಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಮೇರೆಗೆ ಈಗ ರಜತ್ ಹೆಸರನ್ನು ಹೈಕಮಾಂಡಗೆ ಕಳುಹಿಸಿ ಕೊಡಲಾಗಿದೆ ಎಂಬ ಮಾತುಗಳು ಕೇಳಿ‌ಬರುತ್ತಿವೆ.

ಪಕ್ಷದ ನಿಷ್ಠಾವಂತನಾಗಿರೋ ರಜತ್ ಉಳ್ಳಾಗಡ್ಡಿಮಠ ಅವರು ಈ ಹಿಂದೆ ಹು-ಧಾ ಸೆಂಟ್ರಲ್ ವಿಧಾನ‌ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಿತ್ತು. ಚುನಾವಣೆ ಆರಂಭದಿ ಭರ್ಜರಿ‌ತಯಾರಿ ನಡೆಸಿ, ಬಳಿಕ ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಟಿಕೆಟ್ ಬಿಟ್ಟುಕೊಟ್ಟ ರಾಜ್ಯ ವಿಧಾನ ಸಭೆಯಲ್ಲಿ‌ ಕೆಲಸ ಮಾಡಿದ್ದರು. ಈಗ ಮತ್ತೆ ಲೋಕಸಭಾ ಚುನಾವಣೆ ತಯಾರಿಯಲ್ಲಿ ಬ್ಯೂಸಿಯಾಗಿರೋ ರಜತ್‌ಗೆ ಧಾರವಾಡ ಲೋಕಸಭಾ ಕೈ ಪಕ್ಷದ ಟಿಕೆಟ್ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆಯ ಬಳಿಕ ಎಲ್ಲವೂ ತಿಳಿಯಬೇಕಿದೆ.

Comments (0)

Your email address will not be published. Required fields are marked *

Back to top button