
ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಖ್ಯಮಂತ್ರಿ ಬದಲಾವಣೆ ಮತ್ತು ಮುಂದಿನ ಸಿಎಂ ವಿಚಾರವಾಗಿ ಮತ್ತೊಮ್ಮೆ ಖಡಕ್ ಹೇಳಿಕೆ ನೀಡಿದ್ದಾರೆ. ಮುಂದಿನ ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ. ನಂತರ ಯಾರಾದರೂ ಆಗಲಿ ಎಂದು ಹೇಳಿದ್ದಾರೆ..
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳಿಗೆ ಬ್ರೇಕ್ ಹಾಕಿದರು. ಸೆಪ್ಟೆಂಬರ್ ಆಗಲಿ, ನವೆಂಬರ್ ಆಗಲಿ ಅಥವಾ ಡಿಸೆಂಬರ್ ಆಗಲಿ… ಯಾವುದೇ ಕ್ರಾಂತಿಯೂ ನಡೆಯಲ್ಲ, ಬದಲಾವಣೆಯೂ ಆಗಲ್ಲ. 2028ರ ವರೆಗೂ ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ, ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣವಾಗಿ ಒಪ್ಪಿಕೊಂಡಿದೆ. ದೆಹಲಿ ನಾಯಕರಿಗೂ ರಾಜ್ಯದ ಆಡಳಿತದ ಬಗ್ಗೆ ತೃಪ್ತಿಯಿದೆ. ಹೀಗಿರುವಾಗ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಇಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದರು.


