ಭುವನೇಶ್ವರ/ಕೋಲ್ಕತಾ: ಭಾರೀ ಆತಂಕ ಹುಟ್ಟು ಹಾಕಿದ್ದ ‘ಡಾನಾ ಚಂಡಮಾರುತ’ ಒಡಿಶಾದ ಮೇಲೆ ಅಪ್ಪಳಿಸಿದೆಯಾದರೂ, ಹೆಚ್ಚಿನ ಅನಾಹುತ ಮಾಡದೇ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರಮುಖವಾಗಿ ಶೂನ್ಯ ಸಾವು’ ಸಂಭವಿಸಬೇಕು ಎಂಬ ಗುರಿ ಬಹುತೇಕ ಈಡೇರಿದ್ದು, ಒಡಿಶಾದಲ್ಲಿ ಯಾರೂ ಸಾವನ್ನಪ್ಪಿಲ್ಲ ಹಾಗೂ ಪ.ಬಂಗಾಳದಲ್ಲಿ ಇಬ್ಬರು ಮಾತ್ರ ಬಲಿಯಾಗಿದ್ದಾರೆ.ಗುರುವಾರ ತಡರಾತ್ರಿ 12.05ರವೇಳೆಗೆ ಒಡಿಶಾದ ಭಿತರ್ ಕನಿಕಾ ರಾಷ್ಟ್ರೀಯ ಉದ್ಯಾನವನ ಹಾಗೂ ಧಮ್ರಾ ಬಂದರಿನ ನಡುವಿನ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿ ಶುಕ್ರವಾರ ಬೆಳಗ್ಗೆ 8.30ರ ವೇಳೆಗೆ ಪೂರ್ಣಗೊಂಡಿದೆ. ಚಂಡಮಾರುತದ ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದ 20 ಕ್ಕೂ ಹೆಚ್ಚುಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 100 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು ಭಾರೀ ಮಳೆ ಸುರಿಸಿದೆ. ಎರಡೂ ರಾಜ್ಯಗಳಲ್ಲಿ ಮರ,ವಿದ್ಯುತ್,ಫೋನ್‌ಕಂಬಗಳು ತಲೆಕೆಳಗಾಗಿದ್ದು ಬಿಟ್ಟರೆ ಆಸ್ತಿಪಾಸ್ತಿಗೆ ಹೆಚ್ಚು ಹಾನಿಯಾಗಿಲ್ಲ.
ಶೂನ್ಯ ಸಾವು ಗುರಿ ಬಹುತೇಕ ಯಶಸ್ವಿ:ಚಂಡಮಾ ರುತದೆ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರಕೈಗೊಂಡಿದ್ದ ಮುಂಜಾಗ್ರತಾ ಕ್ರಮಗಳ ಫಲವಾಗಿ ಈ ಬಾರಿ ರಾಜ್ಯದಲ್ಲಿಒಂದೇಒಂದು ಸಾವು ಕೂಡಾ ಸಂಭವಿಸಿಲ್ಲ. ಆದರೆ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ನೆರೆಯ ಪ. ಬಂಗಾಳದಲ್ಲಿ ಮಳೆಗೆ ಇಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಒಡಿಶಾದಲ್ಲಿ 10 ಲಕ್ಷ ಹಾಗೂ ಬಂಗಾಳದಲ್ಲಿ 3 ಲಕ್ಷ ಜನರನ್ನು ಸಕಾಲಕ್ಕೆ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದು ಜೀವಹಾನಿ ತಪ್ಪಲು ಕಾರಣ. ಯಾವುದೇ ಅನಾಹುತ ಆಗದ ಕಾರಣ, ಸ್ವಗಿತವಾಗಿದ್ದ ರೈಲು, ವಿಮಾನ ಸಂಚಾರ ಶುಕ್ರವಾರ ಬೆಳಗ್ಗೆಯೇ ಆರಂಭವಾಯಿತು.