ಬೆಂಗಳೂರು: ಮೂರೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಅಗತ್ಯ ತಯಾರಿ ನಡೆಸಬೇಕೆಂದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಡಿನ್ನರ್ ಪಾರ್ಟಿ ಮೂಲಕ ಪ್ರತ್ಯೇಕ ಸಭೆಗಳನ್ನು ನಡೆಸದಂತೆ ಕಟ್ಟಪ್ಪಣೆ ವಿಧಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಅವರು ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿಕೊಂಡು ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು.
ಕೆ.ಸಿ.ವೇಣುಗೋಪಾಲ್ ಸೂಚನೆಗಳೇನು?
• ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಸೂಕ್ತ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಬೇಕು.
• ಮುಡಾ ಸೇರಿದಂತೆ ಯಾವುದೇ ವಿಷಯದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸಿಕೊಳ್ಳಬೇಡಿ.
• ಮುಖ್ಯಮಂತ್ರಿ ಬದಲಾವಣೆಯಿಲ್ಲ, ಈ ಬಗ್ಗೆ ಮಾತಾಡದಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿ.
• ಪಕ್ಷ ಹಾಗೂ ಸರಕಾರಕ್ಕೆ ಡ್ಯಾಮೇಜ್ ಆಗದಂತೆ ಸಿಎಂ, ಡಿಸಿಎಂ ಇಬ್ಬರೂ ಎಚ್ಚರವಹಿಸುವ ಅಗತ್ಯವಿದೆ ಎಂದರು
ಕಳೆದ ಕೆಲ ದಿನಗಳಿಂದ ರಾಜ್ಯ ಸರಕಾರದ ವಿರುದ್ದ ಮೈತ್ರಿ ನಾಯಕರು ವಿರೋಧ ಮಾಡುವುದರಿಂದ ಪಕ್ಷಕ್ಕೆ ಹಾಗೂ ಸರಕಾರಕ್ಕಾಗುತ್ತಿರುವ ಮುಜುಗರಕ್ಕಿಂತ ಪಕ್ಷದ ಕೆಲ ನಾಯಕರ ಹೇಳಿಕೆ ಗಳಿಂದಲೇ ಹೆಚ್ಚು ಮುಜುಗರವಾಗುತ್ತಿದೆ ಎಂದು ಹೇಳಿದರು. ಈ ರೀತಿಯ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಇನ್ಮುಂದೆ ಈ ರೀತಿಯಾಗದಂತೆ ಎಚ್ಚರವಹಿಸಲು ಸೂಚನೆ ನೀಡಿದ್ದಾರೆ. ಪಕ್ಷದ ವಿರುದ್ಧ ಮಾತಾಡುವಂತಿಲ್ಲ: ಇದರೊಂದಿಗೆ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಪಕ್ಷಗಳು ಮುಗಿಬೀಳುತ್ತಿರುವಾಗಲೇ, ಪಕ್ಷದ ಹಲವು ಹಿರಿಯ ಸಚಿವರು ಡಿನ್ನರ್ ಪಾರ್ಟಿಯ ನೆಪದಲ್ಲಿ ಪ್ರತ್ಯೇಕ ಸಭೆ ನಡೆಸುವ ಮೂಲಕ ರಾಜ್ಯ ಜನರಿಗೆ ಕೆಟ್ಟ ಸಂದೇಶ ರವಾನಿಸುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಸೂಚನೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಡಿ.ಕೆ.ಶಿವಕುಮಾರ್ ಅವರಿಗೆ ವೇಣುಗೋಪಾಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಧ್ಯಕ್ಕೆ ಮುಖ್ಯಮಂತ್ರಿಗಳ ಬದಲಾವಣೆಯಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಪಕ್ಷದ ಹೈಕಮಾಂಡ್ ಹೇಳಿದೆ. ಆದ್ದರಿಂದ ಈ ವಿಷಯದಲ್ಲಿ ಯಾರೊಬ್ಬರೂ ಮಾತನಾಡುವಂತಿಲ್ಲ. ಮೈತ್ರಿ ನಾಯಕರು ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪಕ್ಷಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರು ಸಫಲರಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟೆಚ್ಚ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಿವಾಸಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೇ ಸಭೆ ನಡೆಸಿದ್ದಾರೆ. ಈ ಗುಪ್ತ ಸಭೆಯಲ್ಲಿ ಬೇರೆ ಯಾರಿಗೂ ಅವಕಾಶ ನೀಡದೇ ಸುಮಾರು 30 ನಿಮಿಷಗಳ ಕಾಲ ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಡಿ.ಕೆ. ಶಿವಕುಮಾರ್ ಆಗಮಿಸುವ ಮೊದಲು ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಸಿ.ವೇಣುಗೋಪಾಲ್ ಇಬ್ಬರೇ ಸಭೆ ನಡೆಸಿದ್ದರು ಎಂದು ತಿಳಿದುಬಂದಿದೆ.