ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಸೋಮವಾರ ಭಕ್ತಸಾಗರದ ನಡುವೆ ವೈಭವದಿಂದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿಧಿಗಳನ್ನು ನೆರವೇರಿಸಿದರು. ಭಕ್ತರ ಜಯಘೋಷದ ನಡುವೆ ಭಕ್ತಿಯಿಂದ ಭಕ್ತರು ಶ್ರೀ ದೇವರ ಮಹಾರಥ ಎಳೆದು ಭಕ್ತಿ ಮೆರೆದರು.
ವರ್ಷಕ್ಕೆ ಒಂದು ಬಾರಿ ಸೇವೆ ನೆರವೇರಿಸಲು ಅವಕಾಶ ಇರುವ ಬ್ರಹ್ಮರಥೋತ್ಸವ ಸೇವೆಯನ್ನು 148 ಭಕ್ತರು ಸೇವೆ ನಡೆಸಿದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ಅನ್ನು ನೀಡಲಾಗಿತ್ತು. ಅಲ್ಲದೆ ಬ್ರಹ್ಮರಥ ಎಳೆಯುವ ವೇಳೆ ಅನಾವಶ್ಯಕ ಗೊಂದಲ ನಿವಾರಿಸಲು ಸಲುವಾಗಿ ರಥ ಎಳೆಯುವ ಭಕ್ತರಿಗೆ ಪಾಸ್‍ಗಳನ್ನು ನೀಡಲಾಗಿತ್ತು. ಇದರಿಂದ ಬ್ರಹ್ಮರಥೋತ್ಸವವು ಅಚ್ಚುಕಟ್ಟಾಗಿ ಸಂಪನ್ನಗೊಂಡಿತು.