ಕಾಜಿರಂಗ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆನೆ ಮತ್ತು ಹುಲಿ ಸಂರಕ್ಷಿತ ಪ್ರದೇಶವಾದ ಅಸ್ಸಾಂನ ಕಾಜಿರಂಗ್ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಕ್ಕೆ ಮೊದಲ ಬಾರಿ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಉದ್ಯಾನವನದ ಕೇಂದ್ರ ಖೋರಾ ವಲಯದ ಮಿಹಿಮುಖ್ನಲ್ಲಿ ಮೊದಲು ಆನೆ ಸಫಾರಿ ಮಾಡಿದ ನಂತರ , ಅದೇ ವಲಯದಲ್ಲಿ ಜೀಪ್ ಸಫಾರಿ ಮಾಡಿದರು. ಪಾರ್ಕ್ನ ನಿರ್ದೇಶಕ ಸೋನಾಲಿ ಘೋಷ್ ಮತ್ತು ಇತರೆ ಅರಣ್ಯಾಧಿಕಾರಿಗಳು ಈ ವೇಳೆ ಅವರ ಜೊತೆಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಅಸ್ಸಾಂ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಕಾಜಿರಂಗ್ಗೆ ಬಂದಿಳಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದು ಬೆಳಗ್ಗೆ ನಾನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಪಾರ್ಕ್ಗೆ ಭೇಟಿ ನೀಡಿದೆ. ಹಚ್ಚ ಹಸಿರಿನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿರುವ ಘೇಂಡಾ ಮೃಗ ಸೇರಿದಂತೆ ವಿವಿಧ ಗಿಡ ಮರ ಮತ್ತು ಪ್ರಾಣಿಗಳನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವಕ್ಕೆ ಭೇಟಿ ನೀಡಿ ಇಲ್ಲಿನ ಅದ್ಭುತ ಸೌಂದರ್ಯ ಮತ್ತು ಅಸ್ಸಾಂ ಜನರ ಅತಿಥ್ಯವನ್ನು ಸ್ವೀಕರಿಸುವಂತೆ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರು ಭೇಟಿ ನೀಡಲೇಬೇಕಾದ ಸ್ಥಳ ಇದು ಎಂದು ಪ್ರಧಾನಿ ಬಣ್ಣಿಸಿದ್ದಾರೆ.