ಮೈಸೂರು ; ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ವಾಸು(72) ನಿಧನರಾಗಿದ್ದಾರೆ. ಮಾಜಿ ಶಾಸಕ ವಾಸು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ವಾಸು ಅವರು ನಿಧನರಾಗಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಬಾರಿ ಸೋಲು ಕಂಡು, 2013ರ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು.
ಬಿಜೆಪಿಯ ಶಂಕರಲಿಂಗೇಗೌಡ ವಿರುದ್ಧ ಎರಡು ಬಾರಿ, ಬಿಜೆಪಿಯ ಎಲ್. ನಾಗೇಂದ್ರ ವಿರುದ್ಧ ಒಂದು ಬಾರಿ ಸೋಲು ಕಂಡಿದ್ದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಇವರು ಟಿಕೆಟ್ ವಂಚಿತರಾಗಿದ್ದರು.
ಮೈಸೂರು ಮೇಯರ್ ಆಗಿದ್ದ ವಾಸು ಅವರು ಬಳಿಕ ಶಾಸಕರಾದರು. ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಮಾಲೀಕರಾಗಿದ್ದು ಇವರು ‘ಪ್ರಜಾನುಡಿ’ ಪತ್ರಿಕೆ ಮಾಲೀಕರಾಗಿದ್ದರು.