ಈ ವರ್ಷ ತೆರೆಕಂಡ ಅನೇಕ ಸಿನೆಮಾಗಳಲ್ಲಿ ಪ್ರೇಕ್ಷಕರಿಂದ ಟೋಬಿ ಚಿತ್ರ ಪ್ರಶಂಸೆ ಹಾಗೂ ಚರ್ಚೆಗೂ ಒಳಗಾಗಿದೆ. ರಾಜ್ ಬಿ ಶೆಟ್ಟಿ ಬರೆದು ನಟಿಸಿದ ದೊಡ್ಡ ವೆಚ್ಚದ ಚಿತ್ರ ಟೋಬಿ ಭಾಷೆಯ ಎಲ್ಲೆಯನ್ನು ಮೀರಿ ದೇಶದಾದ್ಯಂತ ಮೆಚ್ಚುಗೆಯನ್ನು ಪಡೆದಿತ್ತು.
ಥಿಯೇಟರ್ ನಲ್ಲಿ ಗೆದ್ದ ಟೋಬಿಯನ್ನು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದ ಸಿನಿ ರಸಿಕರಿಗೆ ಹೊಸ ಮಾಹಿತಿಯೊಂದು ಬಂದಿದೆ, ಹೌದು ಟೋಬಿ ಚಿತ್ರ ಇದೇ ಡಿಸೆಂಬರ್ 22 ಕ್ಕೆ ಪ್ರಖ್ಯಾತ ಸೋನಿ ಲಿವ್ ಓಟಿಟಿ ಆ್ಯಪ್ ನಲ್ಲಿ ಬಿಡುಗಡೆಗೊಳ್ಳಲಿದೆ. ಪುನಿತ್ ರಾಜ್ ಕುಮಾರ್ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ನ ನಂತರ ಸೋನಿ ಸಂಸ್ಥೆಯಲ್ಲಿ ಬಿಡುಗಡೆಗೊಳ್ಳಲಿರುವ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ ಟೋಬಿಗೆ ಸಿಕ್ಕಿದೆ.
ರಾಜ್ ಬಿ ಶೆಟ್ಟಿ ಬರೆದು ನಟಿಸಿರುವ ಚಿತ್ರಕ್ಕೆ ಬಾಸಿಲ್ ಅಲ್ಚಾಲಕ್ಕಲ್ ನಿರ್ದೇಶನವಿದ್ದು, ಪ್ರವೀಣ್ ಶ್ರೀಯಾನ್ ಛಾಯಗ್ರಹಣ ಮತ್ತು ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಲೈಟರ್ ಬುಧ್ಧ ಫಿಲಂಮ್ಸ್, ಅಗಸ್ತ್ಯ ಫಿಲಂಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋಸ್ ಮತ್ತು ಸ್ಮೂತ್ ಸೈಲರ್ಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ರಾಜ್ ಬಿ ಶೆಟ್ಟಿ ಯ ಜೊತೆಗೆ ಚೈತ್ರ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಭರತ್ ಜಿ.ಬಿ ಮತ್ತಿತರರ ತಾರಗಣವಿದೆ.