
ರಾಜ್ಯದ ಇಂದಿರಾ ಕ್ಯಾಂಟೀನ್ಗಳಲ್ಲಿ ಇನ್ಮುಂದೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಈ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಕ್ಯಾಂಟೀನ್ಗಳಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಡಿಜಿಟಲ್ ಕ್ರಾಂತಿಗೆ ಸರ್ಕಾರ ಮುಂದಾಗಿದೆ.
ವಿಧಾನ ಪರಿಷತ್ನಲ್ಲಿ ಕಲಬುರಗಿ ಇಂದಿರಾ ಕ್ಯಾಂಟೀನ್ನ ಅವ್ಯವಸ್ಥೆ ಕುರಿತು ಧ್ವನಿ ಎತ್ತಿದ ಜಗದೇವ್ ಗುತ್ತೇದಾರ್ , ಅಲ್ಲಿ ಮೆನು ಪ್ರಕಾರ ತಿಂಡಿ ನೀಡುತ್ತಿಲ್ಲ ಮತ್ತು ಊಟದ ಗುಣಮಟ್ಟವೂ ಸರಿಯಿಲ್ಲ ಎಂದು ದೂರಿದ್ದರು. ಅಲ್ಲದೆ, ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪಾವತಿ ಜಾರಿ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಊಟದ ಗುಣಮಟ್ಟದ ಕುರಿತಾದ ದೂರಿಗೆ ಉತ್ತರಿಸಿದ ಸಚಿವರು, ಪ್ರಾದೇಶಿಕತೆಗೆ ಅನುಗುಣವಾಗಿ ಮೆನು ಸಿದ್ಧಪಡಿಸಿ ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತಿದೆ. ಈವರೆಗೆ ಆಹಾರದ ಗುಣಮಟ್ಟದ ಬಗ್ಗೆ ಯಾವುದೇ ಗಂಭೀರ ದೂರುಗಳು ಬಂದಿಲ್ಲ . ಎಲ್ಲಾದರೂ ಲೋಪದೋಷಗಳಿದ್ದರೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುವುದು ಮತ್ತುತಕ್ಷಣ ಸರಿಪಡಿಸಲಾಗುವುದು ಎಂದು ತಿಳಿಸಿದರು.ಸರ್ಕಾರದ ಈ ನಿರ್ಧಾರದಿಂದಾಗಿ ಇಂದಿರಾ ಕ್ಯಾಂಟೀನ್ಗೆ ಬರುವ ಜನಸಾಮಾನ್ಯರು ಇನ್ಮುಂದೆ ಚಿಲ್ಲರೆ ಹಣದ ಕಿರಿಕಿರಿ ಇಲ್ಲದೆ ಯುಪಿಐಮೂಲಕ ಹಣ ಪಾವತಿಸಿ ಊಟ ಸವಿಯಬಹುದಾಗಿದೆ.




