ಚಿತ್ರದುರ್ಗ : ನಗರದ ಪ್ರವಾಸಿ ಮಂದಿರ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಯಾಂಟೀನ್‍ನಲ್ಲಿ ಸಾರ್ವಜನಿಕರಿಗೆ ಒದಗಿಸುವ ಆಹಾರದ ಗುಣಮಟ್ಟ, ಶುಚಿ-ರುಚಿ ಕಾಯ್ದುಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಡುಗೆ ತಯಾರಿಕೆ ಕೊಠಡಿಗೆ ಭೇಟಿ ನೀಡಿದರು. ಆಹಾರದ ಗುಣಮಟ್ಟ, ಶುಚಿ-ರುಚಿ ಕೊರತೆ, ದಾಖಲೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಕ್ಯಾಂಟೀನ್‍ನಲ್ಲಿ ಉಪಹಾರ ಹಾಗೂ ಊಟದ ತಯಾರಿಕೆ ಉತ್ತಮವಾಗಿಲ್ಲ, ಉಪಹಾರ ರುಚಿಕಟ್ಟಾಗಲು ಅಗತ್ಯವಿರುವ ಸಾಮಗ್ರಿಗಳ ಸಮರ್ಪಕ ಬಳಕೆಯಾಗುತ್ತಿಲ್ಲ, ಹೀಗಾಗಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‍ಗೆ ಹೆಚ್ಚು ಬರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟೀನ್‍ಗೆ ಆಹಾರದ ಗುಣಮಟ್ಟ ಪರಿಶೀಲನೆಗೆ ಸಂಬಂಧಪಟ್ಟ ಅಧಿಕಾರಿ ಪ್ರತಿ ನಿತ್ಯ ಭೇಟಿ ಮಾಡಿ ಪರಿಶೀಲಿಸಬೇಕು, ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು, ಮುಖ್ಯಾಧಿಕಾರಿಗಳು ವಾರಕ್ಕೊಮ್ಮೆ ಕ್ಯಾಂಟೀನ್‍ಗೆ ಭೇಟಿ ನೀಡಿ, ಅಲ್ಲಿಯೇ ಉಪಹಾರ ಮತ್ತು ಊಟ ಸೇವಿಸಿ ಪರಿಶೀಲಿಸಬೇಕು. ಅಲ್ಲದೆ ಅಡುಗೆ ಸಾಮಗ್ರಿಗಳ ದಾಸ್ತಾನು, ಬಳಕೆ, ಊಟೋಪಹಾರ ವಿತರಣೆ ಪ್ರಮಾಣ ಕುರಿತಂತೆ ನಿತ್ಯ ರಿಜಿಸ್ಟರ್ನಲ್ಲಿ ಮಾಹಿತಿ ದಾಖಲಾಗಬೇಕು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆರೋಗ್ಯ ನಿರೀಕ್ಷಕರು ಸ್ವಚ್ಛತೆ ಹಾಗೂ ಶುಚಿತ್ವ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ನಿತ್ಯ ಕ್ಯಾಂಟೀನ್‍ನಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಅಭಿಯಂತರ ಜಾಫರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.