https://x.com/BJP4Karnataka/status/1766503853082464393?s=20

ಬೆಂಗಳೂರು;ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ R.ಅಶೋಕ್‌ ಕಿಡಿಕಾರಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಚುನಾವಣೆಯ ಹೊಂದಾಣಿಕೆಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಈ ಪಾಪರ್‌ ಸರ್ಕಾರದ ಬಳಿ ಬರ ಪರಿಹಾರ ನೀಡಲು ಹಣವಿಲ್ಲ. ಆದರೆ ನೀರನ್ನು ಮಾತ್ರ ನೀಡುತ್ತಿದ್ದಾರೆ ಎಂದು ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸಿದೆ. ರೈತರು ಹೋರಾಟ ಮಾಡುತ್ತಿದ್ದಾರೆ, ಜನರು ಖಾಲಿ ಬಿಂದಿಗೆ ಹಿಡಿದುಕೊಂಡು ಬೀದಿಗಿಳಿದಿದ್ದಾರೆ, ಬೆಂಗಳೂರಿನಲ್ಲಿ ನೀರಿಗೆ ಕೊರತೆಯಾಗಿದೆ. ಇಷ್ಟಾದರೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಾರೆ ಎಂದರೆ ಇಂತಹ ನಾಚಿಕೆಗೆಟ್ಟ ಸರ್ಕಾರ ಇತಿಹಾಸದಲ್ಲೇ ಇಲ್ಲ ಎನ್ನಬೇಕು. ನಮ್ಮ ಕುಡಿಯುವ ನೀರನ್ನು ಚುನಾವಣಾ ಹೊಂದಾಣಿಕೆಗಾಗಿ ಬಿಟ್ಟುಕೊಡುತ್ತಾರೆ.ರಾಜ್ಯಕ್ಕೆ ಕಾಂಗ್ರೆಸ್‌ ದ್ರೋಹ ಬಗೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆಂದು ಹೋರಾಟ ಮಾಡಿ, ಈಗ ಕೇಂದ್ರ ಸರ್ಕಾರ ಮಾಡಬೇಕು ಎನ್ನುತ್ತಿದ್ದಾರೆ. ಆಯವ್ಯದಲ್ಲಿ ಮೇಕೆದಾಟು ಯೋಜನೆಗೆ ನಯಾ ಪೈಸೆ ನೀಡಿಲ್ಲ. ಇವರಿಗೆ ಮಾನವಿದ್ದರೆ 10 ಸಾವಿರ ಕೋಟಿ ರೂಪಾಯಿಯನ್ನು ಈ ಯೋಜನೆಗೆ ಮೀಸಲಿಡಬೇಕಿತ್ತು. ಕಾಂಗ್ರೆಸ್‌ ನಾಯಕರಿಗೆ ಬರ ಪರಿಹಾರ ತರಲು ಯೋಗ್ಯತೆ ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಲಿ. ನಾವು ಸರ್ಕಾರ ನಡೆಸುವಾಗ ಕೇಂದ್ರದ ಕಡೆ ನೋಡದೆ ರೈತರಿಗೆ ಪರಿಹಾರ ನೀಡಲಾಗಿತ್ತು. ಈಗಿನ ಸರ್ಕಾರ ಪಾಪರ್‌ ಆಗಿದ್ದು, ಕುಡಿಯುವ ನೀರಿಗೂ ಹಣವಿಲ್ಲ. ಕುಡಿಯುವ ನೀರು ಕೊಡುವ ಯೋಗ್ಯತೆ ಇಲ್ಲವಾದರೆ ಕುರ್ಚಿ ಬಿಟ್ಟು ತೊಲಗಲಿ ಎಂದು ಆಗ್ರಹಿಸಿದರು.

ಬಾಯಿ ಬಡಿದುಕೊಳ್ಳುತ್ತಿದೆ ಕಾಂಗ್ರೆಸ್‌

ಬರ ಪರಿಹಾರಕ್ಕೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಎಸ್‌ಡಿಆರ್‌ಎಫ್‌ ಹಣ ಈಗಾಗಲೇ ರಾಜ್ಯ ಸರ್ಕಾರಕ್ಕೆ ತಲುಪಿದೆ. ಎನ್‌ಡಿಆರ್‌ಎಫ್‌ ಹಣವನ್ನು ಕೇಂದ್ರ ಸರ್ಕಾರ ಒಟ್ಟಿಗೆ ತೀರ್ಮಾನ ಮಾಡಿ ಎಲ್ಲ ರಾಜ್ಯಗಳಿಗೆ ನೀಡುತ್ತದೆ. ಬಿಜೆಪಿ ಸರ್ಕಾರ ತಕ್ಷಣ ಪ್ರವಾಹ ಹಾನಿ ಪರಿಹಾರ ನೀಡಿದ್ದು, ಬಳಿಕ ಕೇಂದ್ರ ಸರ್ಕಾರ ಹಣ ನೀಡಿತ್ತು. ಮನಮೋಹನ್‌ ಸಿಂಗ್‌ ಸರ್ಕಾರವಿದ್ದಾಗ ಇದೇ ರೀತಿ ತಡವಾಗಿ ಪರಿಹಾರ ನೀಡಲಾಗಿತ್ತು. ಆಗ ಬಾಯಿ ಬಡಿದುಕೊಳ್ಳದ ಕಾಂಗ್ರೆಸ್‌, ಈಗ ಮಾತ್ರ ಬಾಯಿ ಬಡಿದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

By admin

Leave a Reply

Your email address will not be published. Required fields are marked *

Verified by MonsterInsights