#Exclusive NewsTop Newsಜಿಲ್ಲೆರಾಜಕೀಯರಾಜ್ಯಸುದ್ದಿ

ಮಾಲೂರು ರಿ-ಕೌಂಟಿಂಗ್ ಅಖಾಡದಲ್ಲಿ ನಂಜೇಗೌಡರೇ ಬಾಸ್;ಕಾಂಗ್ರೆಸ್‌ಗೆ ಬಿಗ್ ವಿಕ್ಟರಿ!

ಮಾಲೂರು: ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಕುರಿತಾದ ದೀರ್ಘಕಾಲದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ ಶಾಸಕ ಸ್ಥಾನ ಭದ್ರವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಡೆದ ಮರು ಮತ ಎಣಿಕೆಯಲ್ಲಿ ನಂಜೇಗೌಡರು ಜಯಭೇರಿ ಬಾರಿಸಿದ್ದಾರೆ.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕೆ.ವೈ. ನಂಜೇಗೌಡರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ವಿರುದ್ಧ ಕೇವಲ ೨೪೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಮಂಜುನಾಥಗೌಡರು ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಸೂಚನೆಯಂತೆ ನವೆಂಬರ್ ೧೧ರಂದು ಕೋಲಾರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಒಟ್ಟು ೧೮ ಸುತ್ತುಗಳ ಮರು ಮತ ಎಣಿಕೆ ನಡೆಸಲಾಗಿತ್ತು.

ಮರು ಎಣಿಕೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಅವರು ೫೦,೯೫೭ ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಅವರು ೫೦,೭೦೭ ಮತಗಳನ್ನು ಗಳಿಸಿದ್ದಾರೆ. ಅಂತಿಮವಾಗಿ ೨೫೦ ಮತಗಳ ಅಂತರದಿಂದ ನಂಜೇಗೌಡರು ಗೆಲುವು ಸಾಧಿಸಿರುವುದು ಮರು ಎಣಿಕೆಯಲ್ಲಿ ಸಾಬೀತಾಗಿದೆ. ಈ ವರದಿಯನ್ನು ಚುನಾವಣಾ ಆಯೋಗವು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು, ಅದನ್ನು ಆಧರಿಸಿ ನ್ಯಾಯಾಲಯವು ನಂಜೇಗೌಡರ ಆಯ್ಕೆಯನ್ನು ಎತ್ತಿ ಹಿಡಿದಿದೆ.

ಶಾಸಕ ಕೆ.ವೈ. ನಂಜೇಗೌಡ ಜಯ: ಮಂಜುನಾಥಗೌಡರ ಕಾನೂನು ಹೋರಾಟಕ್ಕೆ ಹಿನ್ನಡೆ
ಈ ಫಲಿತಾಂಶದಿಂದ ಮಂಜುನಾಥಗೌಡರು ತೃಪ್ತರಾಗಿಲ್ಲ. ಅಧಿಕಾರಿಗಳು ಕೇವಲ ಐದು ವಿವಿಪ್ಯಾಟ್ ಸ್ಲಿಪ್‌ಗಳನ್ನು ಮಾತ್ರ ಎಣಿಕೆ ಮಾಡಿದ್ದಾರೆ ಮತ್ತು ಸಂಪೂರ್ಣ ಪ್ರಕ್ರಿಯೆಯಲ್ಲಿ ಲೋಪದೋಷಗಳಿವೆ ಎಂದು ಆರೋಪಿಸಿದ್ದಾರೆ. ನನ್ನ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ, ಹೀಗಾಗಿ ಮರು ಮತ ಎಣಿಕೆ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ನಂಜೇಗೌಡರ ಬೆಂಬಲಿಗರು ವಿಜಯೋತ್ಸವ ಆಚರಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button