ಒಡಿಶಾ: ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತದಲ್ಲಿ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ನಡೆದಿದೆ. ಯುವಕ ಭೋರ್ಗರೆವ ನೀರಿನ ಮಧ್ಯೆ ನಿಂತು ವಿಡಿಯೋ ಮಾಡಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ..
ಈತನನ್ನು ಸಾಗರ್ ತುಡು ಎಂದು ಗುರುತಿಸಲಾಗಿದ್ದು, ಯುಟ್ಯೂಬರ್ ಆಗಿದ್ದಾನೆ. ಬೆರಾತ್ಪುರ ನಿವಾಸಿಯಾಗಿರುವ ಈತ ಸ್ನೇಹಿತರೊಂದಿಗೆ ಜಲಪಾತಕ್ಕೆ ಬಂದ ಸಂದರ್ಭದಲ್ಲಿ ದುರಂತ ನಡೆದಿದೆ.
ನೀರಿನ ಮಧ್ಯೆ ಸಾಗರ್ ನಿಂತಿದ್ದು, ಡೋನ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಲಾಗುತ್ತಿತ್ತು, ಈ ವೇಳೆ ಏಕಾಏಕಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳದಲ್ಲಿದ್ದ ಪ್ರವಾಸಿಗರು, ಸ್ಥಳೀಯರು ಸಾಗರ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.. ನಾಪತ್ತೆಯಾಗಿರುವ ಸಾಗರ್‌ಗಾಗಿ ಅಗ್ನಿಶಾಮಕ ದಳ ರಕ್ಷಣಾ ಪಡೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ.