ಬೆಂಗಳೂರು: ಮದ್ಯದ ಅಮಲಿನಲ್ಲಿ ಅತಿವೇಗದ ಚಾಲನೆಗೆ ಒಂದು ಜೀವ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ನಡೆದಿದೆ. ಕ್ರಿಕೆಟ್ ಪಂದ್ಯದ ನಂತರ ನಡೆದ ಎಣ್ಣೆ ಪಾರ್ಟಿ ಕೊನೆಯಲ್ಲಿ ದುರಂತವಾಗಿ ಅಂತ್ಯಗೊಂಡಿದೆ.
ಅಪಘಾತದಲ್ಲಿ ಹೆಬ್ಬಗೋಡಿ ನಿವಾಸಿ ಪ್ರಶಾಂತ್ (28) ಮೃತಪಟ್ಟ ದುರ್ದೈವಿ. ಕಾರು ಚಲಾಯಿಸುತ್ತಿದ್ದ ರೋಶನ್ ಹೆಗ್ಗಡೆ (27) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಿನ್ನೆ ಕ್ರಿಕೆಟ್ ಪಂದ್ಯ ಮುಗಿಸಿದ್ದ ಸ್ನೇಹಿತರು ಸಂಜೆ ಪಾರ್ಟಿ ಆಯೋಜಿಸಿದ್ದರು. ಮದ್ಯ ಸೇವನೆಯ ವೇಳೆ ಇಬ್ಬರ ನಡುವೆ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿದೆ. ಪಾರ್ಟಿ ಮುಗಿಸಿ ಮನೆಗೆ ಮರಳುವಾಗಲೂ ಕಾರಿನಲ್ಲಿ ಕಿರಿಕ್ ಮುಂದುವರಿದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನಲ್ಲಿದ್ದ ಪ್ರಶಾಂತ್ ಚಾಲಕ ರೋಶನ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ರೋಶನ್ ಆಕ್ರೋಶದಲ್ಲಿ ಅಡ್ಡಾದಿಡ್ಡಿ ಹಾಗೂ ವೇಗವಾಗಿ ಕಾರು ಚಲಾಯಿಸಿದ್ದಾನೆ ಎನ್ನಲಾಗಿದೆ.
ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಈ ಭೀಕರ ಅಪಘಾತದ ದೃಶ್ಯಗಳು ಕಾರಿನಲ್ಲಿದ್ದ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರೋಚಕ ಮತ್ತು ಭಯಾನಕವಾಗಿವೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


