ಪ್ರಕಾಶ್ ರೈ ವಿರುದ್ಧ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಾಗಲೇ ನೋವಿನಲ್ಲಿರುವ ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡಬೇಡಿ ಎಂದಿದ್ದರು. ಪವನ್ರ ಹೇಳಿಕೆಗೆ ಪ್ರಕಾಶ ರೈ ಪ್ರತಿಕ್ರಿಯೆ ನೀಡಿದ್ದಾರೆ.
ತಿರುಪತಿ ಲಡ್ಡು ಮಾಡಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿರುವ ಪ್ರಕರಣ ತೀವ್ರವಾಗಿ ಚರ್ಚೆಯಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಯಾರೇ ಆಗಲಿ ಶಿಕ್ಷೆಗೆ ಒಳಪಡುತ್ತಾರೆ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಪವನ್ ಕಲ್ಯಾಣ್, ‘ಸನಾತನ ಧರ್ಮ ರಕ್ಷಣಾ ಬೋರ್ಡ್’ ಅನ್ನು ರಾಷ್ಟ್ರಮಟ್ಟದಲ್ಲಿ ಸ್ಥಾಪನೆ ಮಾಡಬೇಕೆಂದು ಸಹ ಹೇಳಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಪ್ರಕಾಶ್ ರೈ, ‘ಆತಂಕವನ್ನು ಹೆಚ್ಚು ಮಾಡಬೇಡಿ, ದೇಶದಲ್ಲಿ ಈಗಿರುವ ಕೋಮು ಗಲಭೆ ಸಾಕು’ ಎಂದಿದ್ದರು.
ಇಂದು ಮಾಧ್ಯಮಗಳ ಬಳಿ ಇದೇ ವಿಷಯ ಮಾತನಾಡುತ್ತಾ, ಪ್ರಕಾಶ್ ರೈ ಹೆಸರು ಉಲ್ಲೇಖಿಸಿದ ಪವನ್ ಕಲ್ಯಾಣ್, ‘ಪ್ರಕಾಶ್ ರೈ ಅವರೇ ನೀವು ಪಾಠ ಕಲಿಯಬೇಕಿದೆ. ನಿಮ್ಮ ಬಗ್ಗೆ ಗೌರವ ಇದೆ. ಆದರೆ ಪ್ರಕಾಶ್ ರೈ ಮಾತ್ರವಲ್ಲ ಜಾತ್ಯಾತೀತರು ಎಂದು ಹೇಳಿಕೊಳ್ಳುವ ಎಲ್ಲರೂ ಪಾಠ ಕಲಿಯಬೇಕಿದೆ. ಜಾತ್ಯಾತೀತತೆಯ ಹೆಸರಲ್ಲಿ ನೀವು ಹದ್ದುಗಳನ್ನು ಮೀರುತ್ತಿದ್ದೀರಿ. ನಾವು ತೀವ್ರ ನೋವಿನಲ್ಲಿದ್ದೀವಿ. ನಮ್ಮ ಭಾವನೆಗಳ ಬಗ್ಗೆ ಅಪಹಾಸ್ಯ ಮಾಡಬೇಡಿ. ಈಗಾಗಲೇ ನಾವು ತೀವ್ರ ನೋವಿನಲ್ಲಿದ್ದೇವೆ. ಇದು ತಮಾಷೆಯ ವಿಷಯ ಅಲ್ಲ. ಇದು ಸಾಕು, ಸನಾತನ ಧರ್ಮದ ಬಗ್ಗೆ ಮಾತನಾಡುವ ಮುಂಚೆ ಸಾವಿರ ಬಾರಿ ಯೋಚಿಸಿ, ಅಯ್ಯಪ್ಪ ಸ್ವಾಮಿಯ ಬಗ್ಗೆ ಮಾತನಾಡುತ್ತೀರಿ, ಗಣೇಶನ ಬಗ್ಗೆ ಜೋಕುಗಳು ಮಾಡುತ್ತೀರಿ. ಇದೇ ರೀತಿ ಇಸ್ಲಾಂ ಬಗ್ಗೆ ಮಾತನಾಡಬಲ್ಲಿರಾ? ಏಸು ಬಗ್ಗೆ ಮಾತನಾಡಬಲ್ಲಿರಾ?’ ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದರು.