ಬೆಂಗಳೂರು: ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡುತ್ತಲೇ, ರಾಜ್ಯ ಬಿಜೆಪಿಗೆ ‘ಮೋದಿ ಮಾದರಿ ಆಡಳಿತ’ದ ಪಾಠ ಮಾಡುವ ಮೂಲಕ ಸ್ವಪಕ್ಷೀಯರಿಗೇ ಟಾಂಗ್ ಕೊಟ್ಟಿದ್ದಾರೆ.
“ಪ್ರಧಾನಿ ಮೋದಿಯವರನ್ನು ಎಲ್ಲರೂ ಹೊಗಳುತ್ತೀರಿ, ಸಂತೋಷ. ಆದರೆ ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದಾಗ ಮೋದಿ ಮಾದರಿಯ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಏಕೆ ನೀಡಲಿಲ್ಲ?” ಎಂದು ಸ್ವಪಕ್ಷದ ನಾಯಕರನ್ನೇ ಯತ್ನಾಳ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಅವರು, “ಯುಪಿಎ ಅವಧಿಗಿಂತ ಎನ್‍ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ ಅನುದಾನ ಹೆಚ್ಚು. ಸುಮಾರು 2.93 ಲಕ್ಷ ಕೋಟಿ ತೆರಿಗೆ ಪಾಲು ಹಾಗೂ 2.26 ಲಕ್ಷ ಕೋಟಿ ಅಭಿವೃದ್ಧಿ ಹಣ ಬಂದಿದೆ” ಎಂದು ಅಂಕಿಅಂಶ ಬಿಡುಗಡೆ ಮಾಡಿದರು.
ಭ್ರಷ್ಟಾಚಾರದ ಆರೋಪ:
“ಬಿಜೆಪಿ ಕಾಲದಲ್ಲಿ 40% ಕಮಿಷನ್ ಎಂದವರು ಈಗ ಏನು ಮಾಡುತ್ತಿದ್ದಾರೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪದಂತೆ 38,000 ಕೋಟಿ ಬಾಕಿ ಇರುವುದು ನಿಜವಲ್ಲವೇ?” ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸದನದಲ್ಲಿ ಹಾಸ್ಯ-ಚಟಾಕಿ:
ಮುಂದೆ ನಮ್ಮ ಸರ್ಕಾರ ಬರಬಹುದು ಎಂದು ಯತ್ನಾಳ್ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ, “ನೀವು ಬಿಜೆಪಿಯಲ್ಲೇ ಇಲ್ಲ, ಇನ್ಯಾವ ಸರ್ಕಾರ ನಿಮ್ಮದು?” ಎಂದು ಕಾಲೆಳೆದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಯತ್ನಾಳ್, “ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದಿದ್ದರೆ ಕೊನೆಗೆ ನಮ್ಮ ಹತ್ತಿರವೇ ಬರಬೇಕು, ಹುಷಾರ್ ಎಂದು ತಿರುಗೇಟು ನೀಡಿದಾಗ ಸದನದಲ್ಲಿ ನಗು ಉಕ್ಕಿತು.
ಉದ್ಯಮಿಗಳು ಮತ್ತು ಗುತ್ತಿಗೆದಾರರ ಜೊತೆ ಉಪಮುಖ್ಯಮಂತ್ರಿಗಳು ನಡೆದುಕೊಳ್ಳುವ ರೀತಿ ಸರಿಯಿಲ್ಲ ಎಂದು ಕಿಡಿಕಾರಿದ ಅವರು, “ಆಡಳಿತದಲ್ಲಿ ಗೊಂದಲ ಬೇಡ. ಸಿದ್ದರಾಮಯ್ಯನವರೇ ಐದು ವರ್ಷ ಇರುತ್ತಾರೆ ಎಂಬ ಸ್ಪಷ್ಟ ಸಂದೇಶ ಹೋದರೆ ಆಡಳಿತಕ್ಕೆ ಅನುಕೂಲ” ಎಂದು ಮಾರ್ಮಿಕವಾಗಿ ನುಡಿದರು.


