
ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಗುಡುಗಿದ್ದಾರೆ. ದೆಹಲಿಗೆ ಭೇಟಿ ನೀಡಿರುವ ಯತ್ನಾಳ್ , ಯಡಿಯೂರಪ್ಪ ಕುಟುಂಬವನ್ನೇ ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದು, ಹೈಕಮಾಂಡ್ ಭೇಟಿಯ ಸಾಧ್ಯತೆಯನ್ನು ಸದ್ಯಕ್ಕೆ ತಳ್ಳಿಹಾಕಿದ್ದಾರೆ. “ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿಲ್ಲ, ಬದಲಿಗೆ ನನ್ನ ಪುತ್ರನ ಮದುವೆಗೆ ಗಣ್ಯರನ್ನು ಆಹ್ವಾನಿಸಲು ಬಂದಿದ್ದೇನೆ” ಎಂದು ಕಾರಣ ನೀಡಿದ್ದಾರೆ.
“ಯಾರ ಕಾಲಿಗೆ ಬಿದ್ದು ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕೇಳಲು ನಾನು ಬಂದಿಲ್ಲ. ಆ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ನಾನು ಮತ್ತೆ ಪಕ್ಷಕ್ಕೆ ಸೇರುವುದಿಲ್ಲ” ಎಂದು ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಅವರ ಹೆಸರನ್ನು ಉಲ್ಲೇಖಿಸಿ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಈ ಹೇಳಿಕೆಯು ರಾಜ್ಯ ಬಿಜೆಪಿಯ ಆಂತರಿಕ ಭಿನ್ನಮತವನ್ನು ಮತ್ತೊಮ್ಮೆ ದೆಹಲಿ ಅಂಗಳದಲ್ಲಿ ಜಗಜ್ಜಾಹೀರು ಮಾಡಿದೆ.
“ಪ್ರಾದೇಶಿಕ ಪಕ್ಷ” ಕಟ್ಟುವ ಸುಳಿವನ್ನು ಯತ್ನಾಳ್ ನೀಡಿದ್ದಾರೆ. “ಕರ್ನಾಟಕದಲ್ಲಿ ನಾನೇ ಸ್ವಂತ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ ಮತ್ತು 2028ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ, ನಾನೇ ಮುಖ್ಯಮಂತ್ರಿಯಾಗುತ್ತೇನೆ” ಎಂದು ಭವಿಷ್ಯ ನುಡಿದಿದ್ದಾರೆ. ಯತ್ನಾಳ್ ಅವರ ಈ ಆಕ್ರಮಣಕಾರಿ ನಿಲುವು ಮತ್ತು ಸ್ವಂತ ಪಕ್ಷ ಕಟ್ಟುವ ಮಾತುಗಳು ರಾಜ್ಯ ರಾಜಕೀಯ ಸಮೀಕರಣಗಳನ್ನು ಬದಲಿಸುವ ಮುನ್ಸೂಚನೆ ನೀಡಿದ್ದು, ಬಿಜೆಪಿ ಹೈಕಮಾಂಡ್ ಈ ಬಂಡಾಯವನ್ನು ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.




