ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬಂಟಿಯಾಗಿಲ್ಲ, ನಾವೆಲ್ಲರೂ ಅವರ ಜೊತೆ ಇದ್ದೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ನಿನ್ನೆಯೇ ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿದ್ದೇನೆ. ಯತ್ನಾಳ್ ಅವರಿಗೆ ಪಕ್ಷದ ಶಿಸ್ತು ಸಮಿತಿ ನೋಟೀಸ್ ಕೊಟ್ಟಾಗಲೇ ಅದರ ವಾಸನೆ ಬಡಿದಿತ್ತು. ಯತ್ನಾಳ್ ಅವರು ಬಹು ದೊಡ್ಡ ಸಮುದಾಯದ ನಾಯಕರು. ಪಕ್ಷಕ್ಕಾಗಿ ಬಹಳ ದುಡಿದಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬಾರದಿತ್ತು. ಇದರಿಂದ ಮನಸ್ಸಿಗೆ ನೋವಾಗಿದೆ, ಉಚ್ಚಾಟನೆ ಆದೇಶ ಹಿಂದೆ ಪಡೆಯುವಂತೆ ಮನವಿ ಮಾಡಿತ್ತುವೆ.
ಈ ಸಂಬಂಧ ಎಲ್ಲ ಭಿನ್ನಮತೀಯರು ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧರಿಸಿದ್ದೇವೆ, ಎಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ. ನಾಳೆ ಯತ್ನಾಳ್ ಬೆಂಗಳೂರಿಗೆ ಬರುತ್ತಿದ್ದಾರೆ. ನಾವೆಲ್ಲರೂ ಅಲ್ಲಿ ಸಭೆ ನಡೆಸಿ ಚರ್ಚೆ ಮಾಡಲಿದ್ದೇವೆ. ಸಭೆಯ ನಂತರ ಯತ್ನಾಳ್ ಅವರಿಂದ ಪಕ್ಷದ ವರಿಷ್ಠರಿಗೆ ಪತ್ರ ಬರೆಸುತ್ತೇವೆ. ಉಚ್ಚಾಟನೆ ಆದೇಶ ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ರು.


