ಚಿಕ್ಕಮಗಳೂರು: ಆಟ ಆಡೋ ಮಕ್ಕಳೆಲ್ಲ ಬಾರ್‌ಗೆ ಹೋಗ್ತಿದ್ದಾರೆ ಸರ್. ಬದುಕಿ-ಬಾಳಬೇಕಾದ ಮಕ್ಕಳೆಲ್ಲಾ ಕುಡಿದು ಸಾಯ್ತಿದ್ದಾರೆ. ದಯವಿಟ್ಟು ನಮ್ಮೂರಲ್ಲಿರೋ ಬಾರ್ ಬಂದ್ ಮಾಡ್ಸಿ ಸರ್ ಎಂದು ಮಹಿಳೆಯೊಬ್ಬರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮನವಿ ಮಾಡಿದ್ದಾರೆ.
ನಗರದ ಹೊರಹೊಲಯದಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿಗೆ ಸಚಿವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಮರ್ಲೆ ಗ್ರಾಮದ ಮೂಲಕ ಮರಳಿ ಹೋಗುವ ವೇಳೆ ಮಹಿಳೆಯೊಬ್ಬರು ಅವರ ಬಳಿ ಈ ಮನವಿ ಮಾಡಿದ್ದಾರೆ. ನಮ್ಮೂರಲ್ಲಿ ಕದ್ದು- ಮುಚ್ಚಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತುಂಬಾ ಕಷ್ಟವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕುಡಿದು ಸತ್ತು ಹೋಗ್ತಿದ್ದಾರೆ ಎಂದು ಮಹಿಳೆ ಕೈ ಮುಗಿದು ಸಚಿವರ ಬಳಿ ಹೇಳಿಕೊಂಡಿದ್ದಾರೆ.
ಊರಲ್ಲಿ ಮಕ್ಕಳೆಲ್ಲಾ ಮದ್ಯ ವ್ಯಸನಿಗಳಾಗಿದ್ದಾರೆ. ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವೈನ್ ಶಾಪ್ ಬಂದ್ ಮಾಡಿಸಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಎದುರು ಹೇಳಿಕೊಂಡಿದ್ದೇವೆ. ನಮ್ಮ ಊರಿಗೆ ಬಾರ್ & ರೆಸ್ಟೋರೆಂಟ್ ಬೇಡ ಎಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದೆ. ಇಷ್ಟಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವರ ಮುಂದೆ ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


