ಹೊಸ ಜೀವ ಭೂಮಿಗೆ ಬಂದಾಗ ಕೇಳಿಬರುವ ಆ ಮೊದಲ ಅಳುವಿನ ಧ್ವನಿ ಹೆತ್ತವರಿಗೆ ನೆಮ್ಮದಿ ಮತ್ತು ಸಂತೋಷ ತರುತ್ತದೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ? ಮಗು ಹುಟ್ಟಿದ ತಕ್ಷಣ ಯಾಕೆ ಅಳುತ್ತದೆ? ಯಾಕೆ ನಗುವುದಿಲ್ಲ? ಅಥವಾ ಸುಮ್ಮನೆ ಇರಲು ಸಾಧ್ಯವಿಲ್ಲವೇ? ಈ ಅಳುವಿನ ಹಿಂದೆ ಒಂದು ಅದ್ಭುತವಾದ ವಿಜ್ಞಾನ ಅಡಗಿದೆ ಅದು ಏನು ಎಂದರೆ.

ಮೊದಲನೆಯದಾಗಿ, ಮಗುವಿನ ಮೊದಲ ಅಳು ಕೇವಲ ಭಾವನೆಯಲ್ಲ, ಅದು ಮಗು ಬದುಕಲು ಮಾಡುವ ಹೋರಾಟ. ಮಗು ತಾಯಿಯ ಗರ್ಭದಲ್ಲಿ ಇದ್ದಾಗ ಶ್ವಾಸಕೋಶದ ಮೂಲಕ ಉಸಿರಾಡುವುದಿಲ್ಲ. ಅದಕ್ಕೆ ಬೇಕಾದ ಆಮ್ಲಜನಕ (Oxygen) ಹೊಕ್ಕಳ ಬಳ್ಳಿಯ ಮೂಲಕ ಸಿಗುತ್ತಿರುತ್ತದೆ.

ಆದರೆ ಮಗು ಹೊರ ಪ್ರಪಂಚಕ್ಕೆ ಬಂದ ತಕ್ಷಣ, ಶ್ವಾಸಕೋಶಗಳು ಕೆಲಸ ಮಾಡಲು ಆರಂಭಿಸಬೇಕು. ಮಗು ಮೊದಲ ಬಾರಿ ಜೋರಾಗಿ ಅತ್ತಾಗ, ಅದರ ಶ್ವಾಸಕೋಶದಲ್ಲಿ ತುಂಬಿರುವ ದ್ರವ ಹೊರಬಂದು, ಗಾಳಿ ಒಳಗೆ ಹೋಗುತ್ತದೆ. ಅಳು ಮಗುವಿನ ಶ್ವಾಸಕೋಶವನ್ನು ತೆರೆದು, ಉಸಿರಾಟ ಸರಾಗವಾಗಲು ಸಹಾಯ ಮಾಡುತ್ತದೆ. ಹಾಗಾಗಿಯೇ ವೈದ್ಯರು ಮಗು ಹುಟ್ಟಿದ ತಕ್ಷಣ ಅಳುವುದನ್ನು ನಿರೀಕ್ಷಿಸುತ್ತಾರೆ.

ನಗು ಅಥವಾ ಸಂತೋಷ ಅನ್ನೋದು ಒಂದು ಸಂಕೀರ್ಣವಾದ ಭಾವನೆ. ಇದಕ್ಕೆ ಮೆದುಳಿನ ಹೆಚ್ಚಿನ ಬೆಳವಣಿಗೆಯ ಅವಶ್ಯಕತೆ ಇರುತ್ತದೆ. ನಗಲು ಮಗುವಿಗೆ ಸಾಮಾಜಿಕ ತಿಳುವಳಿಕೆ ಮತ್ತು ತನ್ನ ಸುತ್ತಲಿನ ಪರಿಸರವನ್ನು ಗುರುತಿಸುವ ಸಾಮರ್ಥ್ಯ ಬೇಕು.

ಆದರೆ ‘ಅಳು’ ಅನ್ನೋದು ಮಗುವಿನ ಮೆದುಳಿನ ಅತ್ಯಂತ ಮೂಲಭೂತ ಭಾಗವಾದ ‘ಬ್ರೈನ್ ಸ್ಟೆಮ್’ (Brainstem) ನಿಂದ ಬರುತ್ತದೆ. ಇದು ಬದುಕಲು ಬೇಕಾದ ಅಗತ್ಯಗಳನ್ನು ಸೂಚಿಸುವ ಒಂದು ಪ್ರತಿವರ್ತನೆ (Reflex). ಮಗುವಿಗೆ ಹಸಿವಾದಾಗ, ಚಳಿಯಾದಾಗ ಅಥವಾ ಅಸ್ವಸ್ಥತೆ ಎನಿಸಿದಾಗ ಅದನ್ನು ತಿಳಿಸಲು ಇರುವ ಏಕೈಕ ದಾರಿ ಎಂದರೆ ಅದು ಅಳು ಮಾತ್ರ.

ಹಾಗಾದರೆ ಮಗು ನಗಲು ಯಾವಾಗ ಕಲಿಯುತ್ತದೆ? ಸಂಶೋಧನೆಗಳ ಪ್ರಕಾರ, ಮಗು ತನ್ನ 6 ರಿಂದ 8 ವಾರಗಳ ನಂತರ ಮೊದಲ ‘ಸೋಷಿಯಲ್ ಸ್ಮೈಲ್’ ಅಂದರೆ ಮುಗುಳ್ನಗೆಯನ್ನು ನೀಡುತ್ತದೆ. ತನ್ನ 3 ಅಥವಾ 4 ನೇ ತಿಂಗಳಲ್ಲಿ ನಗಲು ಶುರು ಮಾಡುತ್ತದೆ. ಅಲ್ಲಿಯವರೆಗೂ ಅಳುವೇ ಅದರ ಪ್ರಮುಖ ಭಾಷೆ.


