ಬೆಂಗಳೂರು : ಇಲ್ಲಿ ಹಸಿವಿನಿಂದ ಸಾಯೋದಕ್ಕಿಂತ ಅಲ್ಲಿ ಸಾಯುವುದೇ ಲೇಸು..ಇಂತಹದ್ದೊಂದು ಸ್ಟೇಟ್ಮೆಂಟ್ ಕೊಟ್ಟಿರೋದು ಇಸ್ರೇಲ್ ನಲ್ಲಿ ಕೆಲಸ ಮಾಡಲು ಹೊರಟಿರುವ ಕಾರ್ಮಿಕರು..ಭಾರತ ಸುಭದ್ರವಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದು ಪ್ರತಿಭಾಷಣದಲ್ಲೂ ಹೇಳುವ ನರೇಂದ್ರ ಮೋದಿಯವರೇ..ಇದೇನಾ ಸುಭದ್ರಾ ಸರ್ಕಾರ ಎಂದು ಪ್ರಶ್ನಿಸುವ ಸ್ಥಿತಿ ಎದುರಾಗಿದೆ. ಹೌದು ಇಸ್ರೇಲ್ ಯುದ್ದ ನೆಲೆಯಾಗಿದೆ.. ಇಲ್ಲಿ ಕೆಲಸ ಮಾಡೋದಿಕ್ಕೆ ನೌಕರರು, ಕಾರ್ಮಿಕರು ಸಿಗುತ್ತಿಲ್ಲ..ಈ ಹಿನ್ನೆಲೆ ಭಾರತದಿಂದ ಬ್ಯಾಚ್ ಬೈ ಬ್ಯಾಚ್ ಸುಮಾರು 10 ಸಾವಿರ ಕಾರ್ಮಿಕರು ಇಸ್ರೇಲ್ ಗೆ ತೆರಳಲಿದ್ದಾರೆ.. ಈ ಹಿನ್ನೆಲೆ ಪಾಸ್ ಪೋರ್ಟ್ ಹಿಡ್ಕೊಂಡು ಸಜ್ಜಾಗಿದ್ದಾರೆ.
ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವ ಪ್ರತೀಕಾರ ಮಾಡಿರುವ ಇಸ್ರೇಲ್ ನಾಡಿಗೆ ಉದ್ಯೋಗ ಅರಸಿ ಭಾರತದ ಸಾವಿರಾರು ಕಾರ್ಮಿಕರು ಪ್ರಯಾಣಿಸಲು ಅಣಿಯಾಗಿದ್ದಾರೆ. ಇದಕ್ಕಾಗಿ ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಸ್ರೇಲ್ ಸದ್ಯಕ್ಕೆ ಕಾರ್ಮಿಕರ ಬಿಕ್ಕಟ್ಟು ಎದುರಿಸುತ್ತಿದೆ. ಯುದ್ದದ ಹಿನ್ನೆಲೆಯಲ್ಲಿ ಇಸ್ರೇಲ್ ಗಡಿ ದಾಟಿ ಪ್ಯಾಲೇಸ್ತೀನಿಯರು ಕೆಲಸಕ್ಕೆ ಬಾರದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕರು ಸಿಗುತ್ತಿಲ್ಲ. ಇದೀಗ ಇಸ್ರೇಲ್ ಅಧಿಕಾರಿಗಳು ಭಾರತದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ.
ಭಾರತದಲ್ಲಿ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ಮರಗೆಲಸ, ಪ್ಲಂಬಿಂಗ್ನಂತಹ ಕೌಶಲ್ಯ ಹೊಂದಿರುವವರ ನೇಮಕಕ್ಕೆ ಇಸ್ರೇಲ್ ಮುಂದಾಗಿದೆ. ಇದಕ್ಕಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿಶೇಷ ನೇಮಕಾತಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಂಜಾಬ್ನ ಜನರು ನೋಂದಣಿ ಕೇಂದ್ರಗಳಿಗೆ ಬರುತ್ತಿದ್ದಾರೆ. ವಿವಿಧ ಉದ್ಯೋಗಗಳಿಗಾಗಿ ಸದ್ಯ 3,080 ಮಂದಿ ಇಸ್ರೇಲ್ಗೆ ತೆರಳಲು ಆಯ್ಕೆಯಾಗಿದ್ದಾರೆ. ಲಕ್ನೋದ ಸರ್ಕಾರಿ ಐಟಿಐಯಲ್ಲಿ ಇಸ್ರೇಲ್ಗೆ ಕಳುಹಿಸುವ ಕಾರ್ಮಿಕರ ನೋಂದಣಿ ಕಾರ್ಯ ಕೂಡ ಮುಗಿದಿದೆ.
“ಇಸ್ರೇಲ್ನಲ್ಲಿ 10 ಸಾವಿರ ಕಟ್ಟಡ ಕಾರ್ಮಿಕ ಹುದ್ದೆಗಳಿವೆ. ಇದಕ್ಕಾಗಿ ಸಾವಿರಾರು ಮಂದಿ ಐಟಿಐ ಕಚೇರಿ ಎದುರು ನೋಂದಣಿಗೆ ನಿಂತಿದ್ದಾರೆ. ಕಾರ್ಮಿಕ ಇಲಾಖೆಯಿಂದ ನೋಂದಣಿಗೊಂಡ ಮತ್ತು ಸಂಸ್ಥೆ ಸಹಿ ಮಾಡಿದ ಅರ್ಜಿಗಳನ್ನು ಆರಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 30ರಂದ ಕೌಶಲ್ಯ ಪರೀಕ್ಷೆಯನ್ನು ನಡೆಸಲಾಗಿದೆ. ಇಸ್ರೇಲ್ನಲ್ಲಿ ಯುದ್ದದ ಪರಿಸ್ಥಿತಿಯ ನಡುವೆಯೂ ಭಾರತದ ಕಾರ್ಮಿಕರು ಅಲ್ಲಿಗೆ ತೆರಳಲು ಮುಂದಾಗಿರುವುದಕ್ಕೆ ಪ್ರಮುಖ ಕಾರಣ ಕೈ ತುಂಬಾ ಸಿಗಲಿರುವ ವೇತನ. ಇಸ್ರೇಲ್ನಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ಜನರಿಗೆ ಅಲ್ಲಿನ ಸರ್ಕಾರ ಅನೇಕ ಭತ್ಯೆಗಳೊಂದಿಗೆ ಮಾಸಿಕ 1,37,250 ರೂ ಜೊತೆಗೆ, 15 ಸಾವಿರ ರೂ ಬೋನಸ್ ಕೊಡುತ್ತದೆ.
ಈ ವೇತನವನ್ನು ಭಾರತದಲ್ಲಿ ದುಡಿಯಲು ಸರಾಸರಿ ಆರು ತಿಂಗಳು ಬೇಕಾಗುತ್ತದೆ. ಹೀಗಾಗಿ, ಅನೇಕ ಕಾರ್ಮಿಕರು ಅಲ್ಲಿಗೆ ತೆರಳಲು ಸಜ್ಜಾಗಿದ್ದಾರೆ. ನರ್ಸಿಂಗ್ ಮತ್ತು ಕಟ್ಟಡ ನಿರ್ಮಾಣ ವಲಯದಲ್ಲಿ 40 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಳುಹಿಸುವ ಒಡಂಬಡಿಕೆಗೆ ಕಳೆದ ವರ್ಷ ಭಾರತ ಮತ್ತು ಇಸ್ರೇಲ್ ಸರ್ಕಾರಗಳು ಸಹಿ ಹಾಕಿವೆ. ಇನ್ನು ಅಲ್ಲಿಗೆ ತೆರಳುತ್ತಿರುವ ಪ್ರತಿ ಕಾರ್ಮಿಕರು ಹೇಳುತ್ತಿರುವ ಮಾತು ಒಂದೇ..ಅದು ಸಂಬಳ.ನಾನು ಸತ್ರೂ ಪರ್ವಾಗಿಲ್ಲ..ನನ್ನ ಮಕ್ಕಳಿಗಾದ್ರೂ ಒಳ್ಳೇಯದು ಆಗಲಿ ಅನ್ನೋ ಮಾತು.
ಹಸಿವು ಎಂತಹ ನಿರ್ಧಾರಕ್ಕೆ ಬೇಕಾದ್ರೂ ಮನುಷ್ಯನನ್ನ ನೂಕುತ್ತೆ ಅನ್ನೋದಿಕ್ಕೆ ಇಸ್ರೇಲ್ ನತ್ತ ಹೊರಟಿರುವ ಕಾರ್ಮಿಕರೇ ತಾಜಾ ಉದಾಹರಣೆ. ಇಸ್ರೇಲ್ಗೆ ತೆರಳುತ್ತಿರವವರಿಗೆ ಯಾವುದೇ ಭದ್ರತೆಯನ್ನೂ ಭಾರತ ಸರ್ಕಾರ ನೀಡಿಲ್ಲ..ಅಲ್ಲೋಗಿ ಏನಾದ್ರೂ ಹೆಚ್ಚು ಕಡಿಮೆ ಆದ್ರೂ ಅದಕ್ಕೆ ಸ್ವ ಇಚ್ಚೆಯಿಂದ ತೆರಳುತ್ತಿರುವ ಅವರದೇ ಹೊಣೆ ಎಂದಿದೆ ಸರ್ಕಾರ. ವಲಸೆ ಹೋಗುವ ಕಾರ್ಮಿಕರಿಗೆ ಕನಿಷ್ಟ ವಿಮೆ ಸೌಲಭ್ಯವೂ ಇಲ್ಲ..ಆದ್ರೂ ಜಸ್ಟ್ ಸಂಬಳದಾಸೆಗೆ ಇವರೆಲ್ಲಾ ಯುದ್ಧ ಭೂಮಿಯತ್ತ ಹೆಜ್ಜೆ ಹಾಕುತ್ತಿದ್ದಾರೆ..ಭಾರತದಲ್ಲಿ ಬಡತನ ಮತ್ತು ಹಸಿವು ತಾಂಡವಾಡುತ್ತಿದೆ ಅನ್ನೋದಿಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.