ರಾಯಚೂರು: ತುಂಗೆಯ ಒಡಲು ಬಗೆಯುತ್ತಿದ್ದಾರೆ.. ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾದ ಕಮಟು ಅವಶ್ಯಕತೆಗಿಂತಲೂ ಹೆಚ್ಚಾಗಿಯೇ ರಾಚುತ್ತಿದೆ. ಜಿಲ್ಲೆಯ ನದಿಗಳ ಒಡಲುಗಳನ್ನ ಮರಳು ದಂಧೆಕೋರರು ಎಗ್ಗಿಲ್ಲದೆ ಬಗೆಯುತ್ತಿದ್ದಾರೆ ಅಕ್ಷನ್ ತಗೋಳಿ ಅಂತ ದೂರು ದಾಖಲಾದ್ರು ಮೀನ ಮೇಷ ಏಣಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು.
ಹೌದು.. ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮರಳು ದಂಧೆಕೋರರು ತುಂಗಭದ್ರೆಯ ಒಡಲು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಳು ಬಾಚುತ್ತಿದ್ದಾರೆ. ಇನ್ನು ಜಿಲ್ಲಾಡಳಿತ ಕೂಡ ಅದ್ಯಾಕೋ ಏನೋ ಮೌನಕ್ಕೆ ಶರಣಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ದೇವದುರ್ಗ ತಾಲ್ಲೂಕಿನಲ್ಲಿ ಯಥೇಚ್ಚವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಎಗ್ಗಿಲ್ಲದೆ ಹಗಲು ರಾತ್ರಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಪೊಲೀಸರು, ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಕಮಿಷನ್ ಹೋಗ್ತಾ ಇದೆ ಹೀಗಾಗಿ ಅವರು ಆಕ್ಷನ್ ತಗೋತ್ತಿಲ್ಲ ಅಂತ ಕೆಆರ್‌ಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿರುಪಾದಿ ಗೋಮರ್ಸಿ ಆರೋಪಿಸಿದ್ದಾರೆ.
ಸಿಂಧನೂರು ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿನ ತುಂಗಭದ್ರೆಯ ಒಡಲು ಬಗೆಯಲಾಗುತ್ತಿದೆ. ನದಿಗೆ ನೇರವಾಗಿ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಇಳಿಯುತ್ತಿವೆ. 24 ಗಂಟೆ ಮರಳು ಸಾಗಿಸುತ್ತಿದ್ದರು ಯಾರು ಕೇಳುವವರಿಲ್ಲ. ಹೇಳುವವರು ಇಲ್ಲ.. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತಿದೆ. ಇದರ ವಿರುದ್ಧ ದ್ವನಿ ಎತ್ತಿದವರ ದ್ವನಿ ಅಡಗಿಸಲಾಗುತ್ತಿದೆ. ಸರಕಾರದ ಮರಳು ನೀತಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಎಫ್ ಐ ಆರ್ ದಾಖಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.