ನವದೆಹಲಿ: ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್ನವರ ಕೊಡುಗೆ ಏನು? ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಹೊಳೆನರಸೀಪುರದ ಶಾಸಕ ಹೆಚ್.ಡಿ ರೇವಣ್ಣ ಹೇಳಿದರು.
ರಾಜಧಾನಿ ದೆಹಲಿಯಲ್ಲಿ ಹಾಸನದ ಕಾಂಗ್ರೆಸ್ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ, ಶಕ್ತಿ ಪ್ರದರ್ಶನ ನಡೆಯುತ್ತಿದೆ. ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್ನವರ ಕೊಡುಗೆ ಏನು? ಕಾಂಗ್ರೆಸ್ನಿಂದ ಹಾಸನ ನಗರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ, ಅರಸೀಕೆರೆ ರೈಲು ಮಾರ್ಗ ಇರುತ್ತಿರಲಿಲ್ಲ, ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಕಿಡಿಕಾರಿದರು.
2028ಕ್ಕೆ ಮಾತನಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಲಿ, ನಮಗೇನು ಪರಿಣಾಮ ಬೀರಲ್ಲ. ಜನರ ದೇವರ ಆಶೀರ್ವಾದ ಇದೆ. ಜೆಡಿಎಸ್ (JDS) ಕಂಡರೆ ಕಾಂಗ್ರೆಸ್ನವರು ಭಯ ಪಡುತ್ತಾರೆ. 2018ರಲ್ಲಿ ಯಾರು ಬಂದು ಕಾಲು ಕಟ್ಟಿದ್ದರೋ? ಹದಿನಾಲ್ಕು ತಿಂಗಳು ಆದಮೇಲೆ ಸರ್ಕಾರ ಯಾರು ತೆಗೆದರು? ಹಾಸನದಲ್ಲಿ ಲೋಕಸಭೆ ಚುನಾವಣೆ ಹೇಗಾಯಿತು? ಕಡೆಯ ಮೂರು ದಿನದಲ್ಲಿ ಏನಾಯಿತು? 2028 ರಣರಂಗದಲ್ಲಿ ಎಲ್ಲವೂ ಗೊತ್ತಾಗುತ್ತದೆ. ಸಮಯ ಬಂದಾಗ ಮಾತನಾಡುತ್ತೀನಿ ಎಂದು ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ ಬಿಜೆಪಿಯಿಂದ ಕರೆ ತಂದರು. ಜೆಡಿಎಸ್, ದೇವೇಗೌಡರನ್ನು ಮುಗಿಸಲು ಯಾರಿಂದಲು ಸಾಧ್ಯವಿಲ್ಲ. ಸಮಾವೇಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಹೆದರಲ್ಲ. ಆರು ಬಾರಿ ಶಾಸಕನಾಗಿ ನಾನು ಇಂತಹದ್ದನ್ನು ಬಹಳ ನೋಡಿದ್ದೇನೆ. ಇದಕ್ಕೆಲ್ಲಾ ಹೆದರಿ ಓಡುವ ಮಾತೇ ಇಲ್ಲ ಎಂದು ಹೇಳಿದರು.