ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರಿಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ರಾಜಕೀಯ ದ್ವೇಷದ ಆರೋಪಗಳ ನಡುವೆಯೇ, ಸಾಮಾಜಿಕ ಜಾಲತಾಣಗಳ ‘ರೀಲ್ಸ್’ ಗೀಳು ಈ ಅನಾಹುತಕ್ಕೆ ಕಾರಣವಾಯಿತೇ ಎಂಬ ಸ್ಫೋಟಕ ಶಂಕೆ ವ್ಯಕ್ತವಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಳ್ಳಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಕೌಲ್‌ಬಜಾರ್ ಪ್ರದೇಶದ ಎಂಟು ಜನರನ್ನು ವಶಕ್ಕೆ ಪಡೆದಿದ್ದಾರೆ. ವಿಶೇಷವೆಂದರೆ, ಇವರಲ್ಲಿ ಆರು ಮಂದಿ ಅಪ್ರಾಪ್ತರು. ಜಾಲತಾಣಗಳಲ್ಲಿ ಶೋ ಆಫ್ ಮಾಡಲು ರೀಲ್ಸ್ ಚಿತ್ರೀಕರಿಸುತ್ತಿದ್ದಾಗ ಅಜಾಗರೂಕತೆಯಿಂದ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.
ಮನೆಗೆ ಬೆಂಕಿ ಬಿದ್ದು ಸುಮಾರು 1.25 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸೋಫಾ ಸೆಟ್‌ಗಳು, ಟಿವಿ, ಎಸಿ, ಫ್ರಿಡ್ಜ್, ಕಿಚನ್ ಸೆಟ್ ಹಾಗೂ ಬೆಲೆಬಾಳುವ ವುಡನ್ ಬಾಗಿಲುಗಳು ಸಂಪೂರ್ಣ ನಾಶವಾಗಿವೆ. ಸೈಟ್ ಇಂಜಿನಿಯರ್ ರಿಜ್ವಾನ್ ನೀಡಿದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
“ಬಳ್ಳಾರಿಯನ್ನು ಭಸ್ಮ ಮಾಡುತ್ತೇವೆ” ಎಂಬ ಶಾಸಕ ಭರತ್ ರೆಡ್ಡಿ ಅವರ ಹಳೆಯ ಹೇಳಿಕೆಯನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದ್ದು, ರಾಜಕೀಯ ಆಯಾಮದಲ್ಲೂ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ. “ಹಿಂದೆ ಬ್ಯಾನರ್ ಗಲಾಟೆ ನಡೆದಾಗಲೇ ಬೆಂಕಿ ಹಚ್ಚುವ ಬೆದರಿಕೆ ಬಂದಿತ್ತು, ಅದರ ಮುಂದುವರಿದ ಭಾಗವೇ ಇದು” ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ವಶದಲ್ಲಿರುವ ಎಂಟು ಮಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೊಂದು ಆಕಸ್ಮಿಕ ಅವಘಡವೇ ಅಥವಾ ರಾಜಕೀಯ ಪ್ರೇರಿತ ವಿಧ್ವಂಸಕ ಕೃತ್ಯವೇ ಎಂಬುದು ಶೀಘ್ರದಲ್ಲೇ ಹೊರಬರಲಿದೆ.


