
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಬಿಸಿ ಇದೀಗ ಭಾರತೀಯ ಷೇರು ಮಾರುಕಟ್ಟೆಗೂ ತಟ್ಟಿದೆ. ವಹಿವಾಟು ಆರಂಭವಾಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಆರಂಭಿಕ ಹಂತದಲ್ಲೇ, ಮುಂಬೈ ಷೇರುಪೇಟೆ ಸೂಚ್ಯಂಕ ಸುಮಾರು 2 ಸಾವಿರ ಅಂಕಗಳಷ್ಟು ಭಾರಿ ಕುಸಿತ ಕಂಡಿದೆ.
ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಭಾರತೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ತೈಲ ಬೆಲೆ ಹೆಚ್ಚಳದಿಂದಾಗಿ ಹಣದುಬ್ಬರ ಏರಿಕೆಯಾಗುವ ಭೀತಿ ಎದುರಾಗಿದ್ದು, ಇದು ಹೂಡಿಕೆದಾರರನ್ನು ಷೇರುಗಳ ಮಾರಾಟಕ್ಕೆ ಪ್ರೇರೇಪಿಸಿದೆ. ಮಾರುಕಟ್ಟೆ ತೆರೆಯುತ್ತಿದ್ದಂತೆಯೇ ಕಂಡುಬಂದ ಈ ಅಲ್ಲೋಲ ಕಲ್ಲೋಲವು ದಲ್ಲಾಳ್ ಸ್ಟ್ರೀಟ್‌ನಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.
ಐಟಿ, ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ವಲಯದ ಪ್ರಮುಖ ಷೇರುಗಳು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿವೆ. ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಏರ್ಪಡುವವರೆಗೂ ಮಾರುಕಟ್ಟೆಯಲ್ಲಿ ಇಂತಹ ಅಸ್ಥಿರತೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಹೂಡಿಕೆದಾರರು ಸದ್ಯ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು, ಮಾರುಕಟ್ಟೆಯ ಮುಂದಿನ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.




