ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಲಂಡನ್‌ಗೆ ಶಿಫ್ಟ್ ಆಗಲಿದ್ದಾರೆ ಅನ್ನೋ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಕೊಹ್ಲಿ ಮುಂಬೈನಿಂದ ಲಂಡನ್‌ಗೆ ತೆರಳಿದ್ದಾರೆ. ಯಾವುದಾದ್ರೂ ಟೂರ್ನಮೆಂಟ್ ಇದ್ದಾಗ ಲಂಡನ್ನಿಂದಲೇ ಕೊಹ್ಲಿ ಭಾರತಕ್ಕೆ ಟ್ರಾವೆಲ್ ಮಾಡುತ್ತಿದ್ದಾರೆ. ಹಾಗಾಗಿ ಈ ಚರ್ಚೆ ಜೋರಾಗಿದೆ.
ಕೊಹ್ಲಿ ಪತ್ನಿ ಅನುಷ್ಕಾ ಮತ್ತವರ ಮಕ್ಕಳಾದ ಅಕಾಯ್, ವಾಮಿಕಾ ಲಂಡನ್ನಲ್ಲೇ ಇದ್ದಾರೆ. ಸದ್ಯ ಕೊಹ್ಲಿ ಆಗಾಗ ಲಂಡನ್‌ಗೆ ಹೋಗಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಕುಟುಂಬ ಲಂಡನ್ನಲ್ಲೇ ನೆಲೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕೊಹ್ಲಿ ಇತ್ತೀಚೆಗೆ ಲಂಡನ್ ಬೀದಿಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಲಂಡನ್ನಲ್ಲಿ ರಸ್ತೆ ದಾಟುವುದು, ರೈಲ್ವೆ ನಿಲ್ದಾಣದಲ್ಲಿ ಇರುವುದು ಹೀಗೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕುತೂಹಲದಿಂದ ಶೇರ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಈ ವಿಡಯೋದಲ್ಲಿ ಕೊಹ್ಲಿ ತಮ್ಮ ಪತ್ನಿ, ಬಾಲಿವುಟ್ ನಟಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.
ಕೊಹ್ಲಿ ಬ್ರಿಟಿಷ್ ಪ್ರಜೆಯಾದರೆ, ಐಪಿಎಲ್ 2025ರಲ್ಲಿ ಭಾಗವಹಿಸಲು ಕಷ್ಟ ಆಗಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಬಿಸಿಸಿಐ ನಿಯಂತ್ರಣದಲ್ಲಿದ್ದು, ಈ ಟೂರ್ನಿಯಲ್ಲಿ ಭಾಗಿಯಾಗಲು ನಿರ್ದಿಷ್ಟ ನಿಯಮಗಳು ಇವೆ. ಪೌರತ್ವಕ್ಕಿಂತ ಹೆಚ್ಚಾಗಿ ಪ್ರಾತಿನಿಧ್ಯದ ದೇಶದ ಆಧಾರದ ಮೇರೆಗೆ ಐಪಿಎಲ್ ಆಡಬೇಕಾಗುತ್ತದೆ. ಬ್ರಿಟನ್ ಪ್ರಜೆಯಾದ್ರೂ ಕೊಹ್ಲಿ ಕ್ರಿಕೆಟ್ನಲ್ಲಿ ಭಾರತ ತಂಡವನ್ನೇ ಪ್ರತಿನಿಧಿಸಿದ್ರೆ ಐಪಿಎಲ್ ಆಡಲು ಕಷ್ಟ ಆಗುವುದಿಲ್ಲ. ಅವರು ಭಾರತವನ್ನು ಪ್ರತಿನಿಧಿಸದೆ ಹೋದಲ್ಲಿ ಐಪಿಎಲ್ ಆಡುವುದು ಕಷ್ಟವಾಗಲಿದೆ ಎಂದು ವರದಿಯಾಗಿದೆ.