ರೇಣುಕಾಸ್ವಾಮಿ ಕೊಲೆ (Renukawamy Murder Case) ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ದರ್ಶನ್‌ರನ್ನು ನೋಡಲು ಈಗಾಗಲೇ ಹಲವರು ಭೇಟಿ ನೀಡಿದ್ದರು. ಇದೀಗ ದರ್ಶನ್ ಭೇಟಿಗೆ ಅವಕಾಶ ಸಿಗದೆ ವಿನೋದ್ ರಾಜ್ ವಾಪಾಸ್ ಆಗಿದ್ದಾರೆ. ಬಳಿಕ ಮಾಧ್ಯಮಕ್ಕೆ ದರ್ಶನ್ ಪ್ರಕರಣದ ಬಗ್ಗೆ ವಿನೋದ್ ರಾಜ್ (Vinod Raj) ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆ ವಿನೋದ್ ರಾಜ್ ಮಾತನಾಡಿ, ದಿನಕ್ಕೆ ಒಂದೇ ಭೇಟಿ ಅಂತ ಜೈಲು ಅಧಿಕಾರಿಗಳು ಹೇಳಿದರು. ಮಧ್ಯಾಹ್ನ ನಂತರ ಮತ್ತೆ ದರ್ಶನ್ ಮನೆಯವರ ಜೊತೆ ಬರುತ್ತೇನೆ. ಕೆಲವು ನಡೆಯಬಾರದ ಘಟನೆಗಳು ನಡೆದು ಹೋಗುತ್ತವೆ. ವಿಧಿಗಿಂತಲೂ ಮೀರಿದ ಘಟನೆಗಳು ಆಗುತ್ತದೆ. ದರ್ಶನ್‌ಗೆ ಮೂಗಿನ ತುದಿಯಲ್ಲಿ ಕೋಪ ಇದೆ. ಈಗ ದರ್ಶನ್‌ಗೆ ಅಗ್ನಿ ಪರೀಕ್ಷೆ ಅಷ್ಟೇ. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾ ಪ್ರೀತಿ ಇದೆ. ಆಗ ಮಂಚದಲ್ಲಿ ಮಲಗಿದ್ದಾಗಲೂ ದರ್ಶನ್ ಬಗ್ಗೆಯೇ ಅಮ್ಮ ಮಾತನಾಡುತ್ತಿದ್ದರು. ತೂಗುದೀಪ್ ಮಗ ಬಿಟ್ಟು ಕೊಡಬೇಡ ಅಂತಿದ್ದರು. ಯಾಕೆ ಈ ರೀತಿ ಘಟನೆ ಆಯಿತು ಅನ್ನಿಸುತ್ತಿದೆ. ಅಚಾತುರ್ಯ ಅಂತಾ ಅಷ್ಟೇ ಹೇಳ್ತೀನಿ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.
ನಮ್ಮ ತಾಯಿ ಜೊತೆ ದರ್ಶನ್ ತಂದೆ ತೂಗುದೀಪ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ತಾಯಿಯ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು. ಒಂದು ಕಡೆ ಪ್ರಾಣ ಕಳೆದುಕೊಂಡ ಕುಟುಂಬದವರ ನೋವು. ಇನ್ನೊಂದು ಕಡೆ ಅಭಿಮಾನಿಗಳು ಮತ್ತು ನಿರ್ಮಾಪಕರ ಜೊತೆ ದರ್ಶನ್ ಸಂತೋಷವಾಗಿದ್ದರು. ಹೇಗಿದ್ದವರು ಈಗ ಯಾವ ರೀತಿ ಬದಲಾವಣೆ ಆಗಿದೆ ಈ ರೀತಿ ಆಗಬಾರದಿತ್ತು ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.
ಕಳೆದ ಬಾರಿ ನನಗೆ ಸರ್ಜರಿಗೆ ಮುನ್ನ ನಾನು ಮತ್ತು ದರ್ಶನ್ ಭೇಟಿಯಾಗಿದ್ದೆವು. ನಂತರ ದರ್ಶನ್ ತೋಟದ ಮನೆಗೆ ಹೋಗಿ ಕೆಲ ಗಿಡಗಳನ್ನು ಹಾಕಿ ಬರೋಣ ಅಂತ ಅನ್ಕೊಂಡಿದ್ವಿ. ಅಷ್ಟರಲ್ಲಿ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ಆದರಿಂದ ಮೀಟ್ ಮಾಡೋಕೆ ಆಗಿರಲಿಲ್ಲ. ದರ್ಶನ್ 2ನೇ ಬಾರಿ ಜೈಲಿಗೆ ಹೋಗಿರೋದು ಈಗ ಮತ್ತೆ ಯಾಕಾಯಿತು ಎಂದು ನಮಗೆ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.