ವಿಜಯಪುರ: ಒಂದೇ ಕುಟುಂಬದ ಮೂವರು ಆಲಮಟ್ಟಿ ಎಡದಂಡೆ ಕಾಲುವೆಗೆ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮದಲ್ಲ ನಡದಿದೆ..
ಬಸಮ್ಮ ಚಿನ್ನಪ್ಪ ಕೊಣ್ಣೂರ (20), ತಮ್ಮ ಸಂತೋಷ ಚಿನ್ನಪ್ಪ ಕೊಣ್ಣೂರ (18), ಅಳಿಯ ರವಿ ಹಣಮಂತ ಕೊಣ್ಣೂರ (18) ಮೃತ ದುರ್ದೈವಿಗಳು. ಸುಡುಗಾಡು ಸಿದ್ದ ಸಮುದಾಯದ ಅಕ್ಕ, ತಮ್ಮ, ಅಳಿಯ ನೀರುಪಾಲಾಗಿದ್ದು, ಬಸಮ್ಮ ಬಟ್ಟೆ ತೊಳೆಯಲೆಂದು ಕಾಲುವೆಗೆ ಬಂದಾಗ ಕಾಲು ಜಾರಿ ನೀರಿಗೆ ಬಿದ್ದರು. ತಮ್ಮ ಸಂತೋಷ ಅಕ್ಕನನ್ನು ಕಾಪಾಡಲು ನೀರಿಗೆ -ಜಿಗಿದಿದ್ದಾನೆ.
ಇವರಿಬ್ಬರನ್ನು ಕಾಪಾಡಲು ರವಿ ಕೂಡ ನೀರಿಗೆ ಜಿಗಿದಿದ್ದಾನೆ. ನೀರಿನ ರಭಸಕ್ಕೆ ಮೇಲೆ ಬರಲಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ಧಾರೆ ಎಂದು ತಿಳಿದು ಬಂದಿದೆ.. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.
ವಿಷಯ ತಿಳಿದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ವೈಯುಕ್ತಿಕವಾಗಿ ಆ ಕುಟುಂಬಕ್ಕೆ ಲಕ್ಷ ರೂ ಆರ್ಥಿಕ ನೆರವು ಒದಗಿಸುವ ವಾಗ್ದಾನ ಮಾಡಿದರು.
ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಮೃತರಿಗೆ ತಲಾ ರೂ 5 ಲಕ್ಷ ಪರಿಹಾರ ಕೊಡುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ಇವರದ್ದು ಅಲೆಮಾರಿ ಕುಟುಂಬವಾಗಿದ್ದು ಕಡುಬಡತನದ ಜೀವನ ನಡೆಸುವ ಸ್ಥಿತಿ ಇದೆ. ಇವರ ಮಕ್ಕಳನ್ನು ಕಳೆದುಕೊಂಡು ಹತಾಶರಾಗಿದ್ದಾರೆ. ಇವರಿಗೆ ಕೂಡಲೇ ಜಿಲ್ಲಾಡಳಿತ, ತಾಲೂಕಾಡಳಿತ ಆರ್ಥಿಕ ನೆರವು ಒದಗಿಸಿ ನೆರವಾಗಬೇಕು. ಸ್ಥಳೀಯ ಶಾಸಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರ್ಥಿಕ ನೆರವು ಒದಗಿಸಿ ಅಧಿಕಾರಿಗಳಿಗೆ ಸೂಚಿಸಿ ಹೆಚ್ಚಿನ ಪರಿಹಾರ ದೊರಕಿಸಿಕಡಲು ಮುಂದಾಗಬೇಕು ಎಂದರು.


