ಲೋಕಸಭೆ ಸಮರಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಸೀಟು ಗೆದ್ದು ದೆಹಲಿ ಗದ್ದುಗೆ ಮೇಲೆ ಕೂರಲು ಹವಣಿಸುತ್ತಿವೆ. ಇತ್ತ ಕ್ಷೇತ್ರದಲ್ಲಿ ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ಚುರುಕಿನ ಓಡಾಟ ನಡೆಸುತ್ತಿದ್ದಾರೆ. ಯಾವ ಅಂಶಗಳನ್ನ ಆಧರಿಸಿ ಟಿಕೆಟ್ ನೀಡ್ತಾರೆ ಅನ್ನೋ ಪಕ್ಷದ ಇಂಗಿತ ಅರ್ಥ ಮಾಡಿಕೊಂಡಿರುವ ಆಕಾಂಕ್ಷಿಗಳು ಟಿಕೆಟ್ ಪಡೆಯೋದಿಕ್ಕೆ ಮಾರ್ಗಗಳನ್ನ ಹುಡುಕುತ್ತಿದ್ದಾರೆ.

ವಿಜಯಪುರ ಮೀಸಲು ಕ್ಷೇತ್ರದಲ್ಲಿ ಈ ಬಾರಿಯ ಬಿಜೆಪಿ ಟಿಕೆಟ್ ಯಾರಿಗೆ ಅನ್ನೋ ಕೂತುಹಲ ಗರಿಗೆದರಿದೆ. ನಾನಿನ್ನೂ ಸ್ಪರ್ಧಿಸೋದಿಲ್ಲ ಅಂತೇಳಿಕೊಂಡೇ ಮೂರು ಬಾರಿ ವಿಜಯಪುರದಿಂದ ಮೂರು ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಗೆದ್ದಿರುವ ರಮೇಶ್ ಜಿಗಜಿಣಗಿ ಮತ್ತೊಂದು ಸುತ್ತಿನ ಸ್ಫರ್ಧೆಗೆ ಇಳಿಯಲು ತೊಡೆ ತಟ್ಟಿ ನಿಂತಿದ್ದಾರೆ. ಇವರ ನಡುವೆ ಹೊಸ ಮುಖಗಳು ಕೂಡ ಟಿಕೆಟ್ ಗಾಗಿ ಪೈಪೋಟಿಗೆ ಇಳಿದಿದ್ದಾರೆ.

ಹೌದು..ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿಯಲ್ಲೀಗ ಎಲ್ಲವೂ ಮೊದಲಿನಂತಿಲ್ಲ..ಭಿನ್ನಾಭಿಪ್ರಾಯಗಳು ಹೊಗೆ ಆಡುತ್ತಿವೆ. ನಾನಾ ನೀನಾ ಎಂಬ ಲೆಕ್ಕಚಾರವೂ ಸ್ಥಳೀಯ ಮುಖಂಡರಲ್ಲಿದೆ. ಸಂಸದ ಜಿಗಜಿಣಗಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಬಹಿರಂಗ ಸಮರವೇ ನಡೆಯುತ್ತಿದೆ. ಇದರ ನಡುವೆಯೇ ಸಂಘ ಪರಿವಾರದ ಕೃಪಾಕಟಾಕ್ಷವಿರುವ ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಡಾ.ಬಾಬು ರಾಜೇಂದ್ರ ನಾಯಕ ಕೂಡ ನಾನು ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ.

ಸಂಘದ ಕೃಪಾರ್ಶಿವಾದ ನನ್ನ ಮೇಲಿದೆ. ಅವರ ಭರವಸೆ ಮೇಲೆಯೇ ನಾನಿಲ್ಲಿ ಸೇವೆ ಮಾಡುತ್ತಿದ್ದೀನಿ. ಪಕ್ಷ ಟಿಕೆಟ್ ಕೊಡಲಿ ಬಿಡಲಿ ನನ್ನ ಸೇವಾ ಮನೋಭಾವ ಇದ್ದೇ ಇರುತ್ತೆ ಅಂತ ಬಾಬು ನಾಯಕ ಹೇಳ್ತಾ ಇದ್ದಾರೆ. ಇನ್ನು ರಾಜೇಂದ್ರ ನಾಯಕ ಬಗ್ಗೆ ಹೇಳೋದಾದ್ರೆ, ಕೋವಿಡ್ ಸಂದರ್ಭದಲ್ಲಿ ತಮ್ಮ ಸ್ವಂತ ಕ್ಲಿನಿಕ್ ಮುಚ್ಚಿ, ಸಾರ್ವಜನಿಕವಾಗಿ ವೈದ್ಯಕೀಯ ಸೇವೆ ಮಾಡಿದ್ದನ್ನ ವಿಜಯಪುರ ಲೋಕಸಭಾ ಕ್ಷೇತ್ರದ ಜನ ಮರೆತಿಲ್ಲ. ವೈದ್ಯರಾಗಿ ಎಲ್ಲಾ ಸಮಾಜದ ಜನರೊಂದಿಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದಾರೆ. ಇನ್ನು ಕಳೆದ ವಿಧಾನಸಭೆ ಚುನಾವಣೆ ವೇಳೆ ನಾಗಾಠಾಣಾ ಕ್ಷೇತ್ರದಿಂದ ಟಿಕೇಟ್ ಆಕಾಂಕ್ಷಿಯಾಗಿದ್ರು. ಆದ್ರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಇದೀಗ ಲೋಕಸಭೆಗೆ ಟಿಕೆಟ್ ಸಿಗುವ ವಿಶ್ವಾಸ ಇವರಿಗಿದೆ. ಅಲ್ಲದೇ ಸಂಘ ಪರಿವಾರದ ಕೃಪಾರ್ಶೀವಾದ ಜೋರಾಗಿಯೇ ಇರೋದ್ರಿಂದ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ.
ಡಾ.ಬಾಬು ರಾಜೇಂದ್ರ ನಾಯಕರ ಜನಸೇವಾ ಮನೋಭಾವದ ಕುರಿತು ಪಕ್ಷದಲ್ಲಿ ಒಳ್ಳೆ ಅಭಿಪ್ರಾಯವೇ ಇದೆ. ಹಳೆ ಮುಖಗಳ ಬದಲಿಗೆ ಹೊಸ ಮುಖಗಳಿಗೆ ಪಕ್ಷ ಮಣೆ ಟಿಕೇಟ್ ನೀಡುವ ನಿರ್ಧಾರ ಮಾಡಿದ್ರೆ, ಆ ಲಿಸ್ಟ್ ನಲ್ಲಿ ರಾಜೇಂದ್ರ ನಾಯಕರ ಹೆಸರೂ ಮೊದಲ ಪಟ್ಟಿಯಲ್ಲಿ ಇರಲಿದೆ ಅಂತಾರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು.
ಇನ್ನು ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಉಮೇಶ್ ಕಾರಜೋಳ, ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿರುವ ಮಹೇಂದ್ರ ಕುಮಾರ್ ನಾಯಕ ರ ಹೆಸರು ಕೇಳಿ ಬರುತ್ತಿದೆ. ಇನ್ನು ಮಹದೇವಪುರ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದ ಅರವಿಂದ ಲಿಂಬಾವಳಿಯವರನ್ನೂ ಮೀಸಲು ಕ್ಷೇತ್ರದ ಕಾರಣ ಇಲ್ಲಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಅಂತ ಕೆಲ ರಾಜಕೀಯ ವಿಶ್ಲೇಷಕರು ಹೇಳ್ತಿದ್ದಾರೆ.
ಹೊಸ ಮುಖ, ಸೇವಾ ಮನೋಭಾವ, ಪರಿವಾರದ ಕೃಪೆ, ಎಲ್ಲವೂ ಇರುವ ಡಾ.ಬಾಬು ರಾಜೇಂದ್ರ ನಾಯಕರತ್ತ ಬಿಜೆಪಿ ವರಿಷ್ಟರ ಚಿತ್ತ ಇದೆ. ಟಿಕೆಟ್ ಕೊಟ್ಟರೆ ಗೆದ್ದೇ ಗೆಲ್ತೀನಿ ಅನ್ನುವ ವಿಶ್ವಾಸದಲ್ಲಿದ್ದಾರೆ ಡಾ.ಬಾಬು ರಾಜೇಂದ್ರ ನಾಯಕ.