Wednesday, January 28, 2026
18.8 C
Bengaluru
Google search engine
LIVE
ಮನೆ#Exclusive NewsTop Newsಅಮೆರಿಕ ವಿರುದ್ಧ ಭಾರತಕ್ಕೆ ಗೆಲುವು; ಸೂಪರ್ 8ಕ್ಕೆ ಎಂಟ್ರಿ

ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವು; ಸೂಪರ್ 8ಕ್ಕೆ ಎಂಟ್ರಿ

ರೋಹಿತ್ ಶರ್ಮಾ  ನೇತೃತ್ವದ ಟೀಂ ಇಂಡಿಯಾ ಐಸಿಸಿ T20 ವಿಶ್ವಕಪ್ 2024 ರ 25 ನೇ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು (IND vs USA) 7 ವಿಕೆಟ್‌ಗಳಿಂದ ಮಣಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್ 8 ಸುತ್ತಿಗೆ ಲಗ್ಗೆ ಇಟ್ಟಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 110 ರನ್ ಗಳಿಸಿತು. ಈ ಸವಾಲನ್ನು ಟೀಂ ಇಂಡಿಯಾ 18.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ  ಜೋಡಿ ಟೀಂ ಇಂಡಿಯಾ ಗೆಲುವಿನ ರೂವಾರಿಗಳಾದರು. ಇವರಿಬ್ಬರ ನಡುವೆ 4 ನೇ ವಿಕೆಟ್​ಗೆ 72 ರನ್​ಗಳ ಜೊತೆಯಾಟವೂ ಕಂಡುಬಂತು. ಇದೆಲ್ಲದರ ಹೊರತಾಗಿ ಅಲ್ಪ ಟಾರ್ಗೆಟ್ ನೀಡಿಯೂ ಗೆಲುವಿಗಾಗಿ ಅಮೆರಿಕ ನೀಡಿದ ಹೋರಾಟ ಶ್ಲಾಘನೀಯವಾಗಿತ್ತು. ಸ್ಟಾರ್ ಆಟಗಾರರೇ ಹೊಂದಿರುವ ಟೀಂ ಇಂಡಿಯಾವನ್ನು ಅಮೆರಿಕ ವೇಗಿಗಳು ಕಟ್ಟಿಹಾಕಿದ್ದು ನಿಜಕ್ಕೂ ಮೆಚ್ಚುವಂತಿತ್ತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕಕ್ಕೆ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಮೊದಲ ಓವರ್‌ನಲ್ಲೇ ಡಬಲ್ ಹೊಡೆತ ನೀಡಿದರು. ಇದರಿಂದ ತಂಡವು ಕೊನೆಯವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಂಡದ ಪರ ಒಂದೇ ಒಂದು ಉತ್ತಮ ಜೊತೆಯಾಟ ಕಂಡು ಬರಲಿಲ್ಲ. ಹೀಗಾಗಿ ಅಮೆರಿಕ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ತಂಡದ ಪರ ಸ್ಟೀವನ್ ಟೇಲರ್ 24 ರನ್ ಹಾಗೂ ನಿತೀಶ್ ಕುಮಾರ್ 27 ರನ್ ಗಳಿಸಿದರೆ, ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಹೊರತಾಗಿ ಆರನ್ ಜೋನ್ಸ್ 11 ರನ್, ಕೋರಿ ಆಂಡರ್ಸನ್ 15 ರನ್, ಹರ್ಮೀತ್ ಸಿಂಗ್ 10 ರನ್ ಮತ್ತು ವ್ಯಾನ್ ಶಾಲ್ಕ್‌ವಿಕ್ 11 ರನ್​ಗಳ ಕೊಡುಗೆ ನೀಡಿದರು. ಭಾರತದ ಪರ ಅರ್ಷದೀಪ್ ಸಿಂಗ್ ತಮ್ಮ 4 ಓವರ್‌ಗಳಲ್ಲಿ 9 ರನ್‌ ನೀಡಿ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

ಇನ್ನು 111 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೂಡ ಸಂಕಷ್ಟಕ್ಕೆ ಸಿಲುಕಿತು. ಮುಂಬೈ ಮೂಲದ ಅಮೆರಿಕ ಆಟಗಾರ ಸೌರಭ್ ನೇತ್ರವಾಲ್ಕರ್ ಅವರು ವಿರಾಟ್ ಕೊಹ್ಲಿಯನ್ನು ಗೋಲ್ಡನ್ ಡಕ್ ಆಗಿ ಔಟ್ ಮಾಡಿದರು. ಆ ಬಳಿಕ 3 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು. ಹೀಗಾಗಿ ಟೀಂ ಇಂಡಿಯಾಗೆ ನಿರಾಶಾದಾಯಕ ಆರಂಭ ಸಿಕ್ಕಿತು. ಆದರೆ ಆ ನಂತರ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಮೂರನೇ ವಿಕೆಟ್‌ಗೆ 29 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ರಿಷಭ್ 20 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು.

 

ಪಂತ್ ಬಳಿಕ ಮೈದಾನಕ್ಕೆ ಬಂದ ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ 67 ಎಸೆತಗಳಲ್ಲಿ 67 ರನ್‌ಗಳ ಅಜೇಯ ಜೊತೆಯಾಟವನ್ನು ಹಂಚಿಕೊಂಡರು. ಈ ಜೊತೆಯಾಟದ ಸಮಯದಲ್ಲಿ ಸಿಂಗಲ್ಸ್ ಮತ್ತು ಡಬಲ್ ರನ್‌ಗಳೊಂದಿಗೆ ಅವಕಾಶ ಪಡೆದಾಗ ಶಿವಂ ಮತ್ತು ಸೂರ್ಯ ಇಬ್ಬರೂ ದೊಡ್ಡ ಹೊಡೆತಗಳನ್ನು ಹೊಡೆದರು. ಈ ಮೂಲಕ ಟೀಂ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಸೂರ್ಯ 49 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ ಔಟಾಗದೆ 50 ರನ್ ಬಾರಿಸಿದರೆ, ಶಿವಂ 35 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಸಹಿತ ಅಜೇಯ 31 ರನ್ ಗಳಿಸಿದರು. ಅಮೆರಿಕ ಪರ ಸೌರಭ್ ನೇತ್ರವಾಲ್ಕರ್ 2 ವಿಕೆಟ್ ಪಡೆದರೆ, ಅಲಿ ಖಾನ್ 1 ವಿಕೆಟ್ ಪಡೆದರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments