Top Newsದೇಶ/ವಿದೇಶಸುದ್ದಿ

ಭಾರತಕ್ಕೆ ರಾಜತಾಂತ್ರಿಕ ಗೆಲುವು : ಮುಂಬೈ ದಾಳಿ ರೂವಾರಿ ತಹವ್ವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ

ನವದೆಹಲಿ: 2008ರ ಮುಂಬೈ ದಾಳಿಯ ಸಂಚುಕೋರ ತಹಾವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕದ ಸುಪ್ರೀಂಕೋರ್ಟ್ ಕೊನೆಗೂ ಸಮ್ಮತಿಸಿದ್ದು ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ. ಹೀಗಾಗಿ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ರಾಣಾನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮರು ದಿನವೇ ಅಮೆರಿಕ ಸುಪ್ರೀಂಕೋರ್ಟ್​​​ನಿಂದ ಈ ತೀರ್ಪು ಹೊರಬಿದ್ದಿದೆ.

ರಾಣಾ ಹಸ್ತಾಂತರವನ್ನು ಅಮೆರಿಕ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ರಾಣಾ ಮನವಿಯನ್ನು ವಜಗೊಳಿಸಿರುವ ಕೋರ್ಟ್, ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ತೀರ್ಪು ನೀಡಿದೆ.

ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಕಳೆದ ನವಂಬರ್​​ನಲ್ಲಿ ಅಮೆರಿಕ ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಒಂದು ದಿನದ ನಂತರ ಅಮೆರಿಕ ಸುಪ್ರೀಂ ಕೋರ್ಟ್ ರಿಟ್ ಅರ್ಜಿಯನ್ನು ತಿರಸ್ಕರಿಸಿದೆ. ಮುಂಬೈ ದಾಳಿ ಅಪರಾಧಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಮನವಿಗೆ ಅಮೆರಿಕ ಸರ್ಕಾರ ಬೆಂಬಲ ಸೂಚಿಸಿತ್ತು.

ತಹಾವೂರ್ ರಾಣಾ ಯಾರು?
ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದಾನೆ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭಾಗವಹಿಸಿದ್ದಾನೆ ಎಂದು ಭಾರತ ಆರೋಪಿಸಿದೆ.

ಮುಂಬೈ ದಾಳಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಡೇವಿಡ್ ಹೆಡ್ಲಿ ರಾಣಾನ ಸ್ನೇಹಿತ. ಡೇವಿಡ್ ಹೆಡ್ಲಿಯನ್ನು ರಾಣಾ ಅಪರಾಧ ಜಗತ್ತಿಗೆ ತಳ್ಳಿದನೆಂದು ಹೇಳಲಾಗಿದೆ. 2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು. ಮುಂಬೈ ದಾಳಿಯಲ್ಲಿ ರಾಣಾ ಶಾಮೀಲಾಗಿರುವುದು ಬಹಿರಂಗವಾಯಿತು. ರಾಣಾನನ್ನು 2009 ರಲ್ಲಿ ಅಮೆರಿಕದ ತನಿಖಾ ಸಂಸ್ಥೆಗಳು ಬಂಧಿಸಿವೆ.

Comments (0)

Your email address will not be published. Required fields are marked *

Back to top button