ಉಡುಪಿ: ವಿವಿಧ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಪ್ರದೇಶಗಳ ಮೇಲೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ದಿಢೀರ್ ದಾಳಿ ನಡೆಸಿ, ಭ್ರಷ್ಟ ಮತ್ತು ಬೇಜವಾಬ್ದಾರಿ ಅಧಿಕಾರಿಗಳ ಬೆವರಿಳಿಸಿದ್ದಾರೆ. ಭೇಟಿ ಸಂದರ್ಭದಲ್ಲಿ ಕಂಡುಬಂದ ಅವ್ಯವಸ್ಥೆಗಳನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ವಿದ್ಯಾವಂತ ಮೋಸಗಾರರಿಂದ ದೇಶ ಹಾಳಾಗುತ್ತಿದೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಸಲು ಪರವಾನಗಿ ಸಿಕ್ಕಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ತಾಲೂಕು ಕಚೇರಿ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ, ಸರ್ಕಾರಿ ನೌಕರರು ನಿಗದಿತ ಸಮವಸ್ತ್ರ ಧರಿಸದೇ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಿರುವುದನ್ನು ಕಂಡು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಅಧಿಕಾರಿಯೊಬ್ಬರ ವೈಯಕ್ತಿಕ ಬ್ಯಾಗ್‌ನಲ್ಲಿ ಚಿಟ್ ಫಂಡ್ ಮತ್ತು ಸಾಲದ ದಾಖಲೆಗಳು ಪತ್ತೆಯಾಗಿದ್ದು, ಕೂಡಲೇ ಅಂತಹ ನೌಕರರನ್ನು ಅಮಾನತುಗೊಳಿಸಲು ಸೂಚಿಸಿದರು. ಏಳು ವರ್ಷಗಳಿಂದ ಮಂಜೂರಾದ ಭೂಮಿಗಾಗಿ ಅಲೆಯುತ್ತಿದ್ದ ಮಾಜಿ ಸೈನಿಕನ ಅಳಲನ್ನು ಆಲಿಸಿದ ಅವರು, ತಾಂತ್ರಿಕ ದೋಷ ಸರಿಪಡಿಸಿ ತಕ್ಷಣ ಭೂಮಿ ಹಸ್ತಾಂತರಿಸಲು ಆದೇಶಿಸಿದರು.
ಮಲ್ಪೆ ಬಂದರು ಮತ್ತು ನಿಟ್ಟೂರಿನ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿದ ಉಪಲೋಕಾಯುಕ್ತರು, ಅಲ್ಲಿನ ದುಸ್ಥಿತಿಯನ್ನು ಕಂಡು ಕೆಂಡಾಮಂಡಲವಾದರು. ಶುದ್ಧೀಕರಿಸದ ಕೊಳಕು ನೀರು ನೇರವಾಗಿ ಸಮುದ್ರಕ್ಕೆ ಸೇರುತ್ತಿರುವುದನ್ನು ಕಂಡು, “ಇದೇ ಕೊಳಕು ನೀರು ತಿಂದ ಮೀನುಗಳು ದೇಶಕ್ಕೆಲ್ಲ ಸರಬರಾಜಾಗುತ್ತಿವೆ” ಕೆಮಿಕಲ್ ಮಿಶ್ರಿತ ನೀರಿನಿಂದ ಮೀನುಗಾರಿಕೆ ಕುಸಿಯುತ್ತಿದೆ ಈ ಎರಡೂ ಘಟಕಗಳ ಅಸಮರ್ಪಕ ನಿರ್ವಹಣೆ ಕುರಿತು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದರು.
ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅವ್ಯವಸ್ಥೆ ಗಮನಿಸಿ ಹೋಟೆಲ್‌ಗಳಲ್ಲಿ ತಿಂಡಿಯ ದರ ಪಟ್ಟಿ ಪ್ರದರ್ಶಿಸದ ಮಾಲೀಕರು ಮತ್ತು ಅಶುಚಿಯಾದ ಆಹಾರ ತಯಾರಿಕಾ ವಿಧಾನವನ್ನು ಕಂಡು ಗರಂ ಆದರು. ಬಸ್ ನಿಲ್ದಾಣದಲ್ಲಿ ಕಸ ಹಾಕಲು ತೆರೆದ ಡ್ರಮ್‌ಗಳನ್ನು ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರತ್ಯೇಕ ಡಸ್ಟ್ ಬಿನ್ ಇರಿಸಲು ಸೂಚಿಸಿದರು. ಉಡುಪಿಯಂತಹ ಸಾಕ್ಷರ ಜಿಲ್ಲೆಯಲ್ಲಿ ಅಧಿಕಾರಿಗಳು ವಿದ್ಯಾವಂತರಿದ್ದರೂ ಜನರನ್ನು ಯಾಮಾರಿಸುತ್ತಿದ್ದಾರೆ ಎಂಬುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.


