ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11ಕ್ಕೆ ಬಜೆಟ್ ಮಂಡಿಸ ಲಿದ್ದು, ಇದರೊಂದಿಗೆ ಸತತ 8 ಬಜೆಟ್ ದಾಖಲಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಸಲದ ಬಜೆಟ್ ಕುರಿತು ವಿವಿಧ ವಲಯಗಳು ನಾನಾ ನಿರೀಕ್ಷೆ ಇಟ್ಟುಕೊಂಡಿವೆಯಾದರೂ, ಬಜೆಟ್‌ನ ಪ್ರಮುಖ ಗುರಿ ಮಹಿಳೆಯರು, ಬಡವರು, ಮಧ್ಯಮ ವರ್ಗ.
ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸುಳಿವು ನೀಡಿದ್ದಾರೆ. ಹಣದುಬ್ಬರ ಹೊಡೆತಕ್ಕೆ ಸಿಕ್ಕಿರುವ ಮಧ್ಯಮ ವರ್ಗವನ್ನು ರಕ್ಷಿಸುವ ಸಲುವಾಗಿ ತೆರಿಗೆ ದರ ಕಡಿತ ಅಥವಾ ತೆರಿಗೆ ಸ್ತರದಲ್ಲಿ ಬದಲಾವಣೆ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ ಜಾಗತಿಕ ಪರಿಸ್ಥಿತಿಗಳ ಪರಿಣಾಮ ದೇಶದ ಆರ್ಥಿಕತೆಗೆ ಮಂದಗತಿಯ ಸ್ಪರ್ಶವಾಗಿರುವ ಹಿನ್ನೆಲೆ ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ಪ್ರೋತ್ಸಾಹಕಗಳು ಮತ್ತು ಜನರ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಸರ್ಕಾರಘೋಷಿಸುವ ಸಾಧ್ಯತೆ ಇದೆ.
ಆದರೆ ವಿತ್ತೀಯ ಶಿಸ್ತನ್ನು ಕಾಪಾಡುವ ಗುರಿಯನ್ನೂ ಸರ್ಕಾರ ಹಾಕಿಕೊಂಡಿರುವ ಕಾರಣ, ಸರ್ಕಾರ ಎರಡರ ನಡುವೆ ಹೇಗೆ ಸಮತೋಲನ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.