ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಜನರಲ್ ಝಡ್ ಯುವಕರ ಆಕ್ರೋಶ ತಾರಕಕ್ಕೇರಿದೆ. ಸರ್ಕಾರದ ವಿವಾದಾತ್ಮಕ ನಿರ್ಧಾರವನ್ನು ರದ್ದುಗೊಳಿಸಿದರೂ, ಪ್ರತಿಭಟನೆಗಳು ತೀವ್ರಗೊಂಡು, ಹಿಂಸಾಚಾರಕ್ಕೆ ಕಾರಣವಾಗಿವೆ.
ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವನ್ನು ತೆಗೆದು ಹಾಕಿರುವದಾಗಿ ಸರ್ಕಾರ ಘೋಷಿಸಿದ್ದರೂ, ಭುಗಿಲೆದ್ದಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನೇಪಾಳದ ಹಣಕಾಸು ಸಚಿವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮೊದಲು ಮನೆ ಮೇಲೆ ಹಲ್ಲೆ ನಡೆಸಿದ ಪ್ರತಿಭಟನಾಕಾರು ಬಳಿಕ ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಉದ್ರಿಕ್ತನೊಬ್ಬ ಒದ್ದ ತೀವ್ರತೆಗೆ ಹಣಕಾಸು ಮಂತ್ರಿ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಮಂತ್ರಿ ಹುಚ್ಚನಂತೆ ಓಡಿದ್ದು, ಕೇಂದ್ರ ಮಂತ್ರಿಯ ಶರ್ಟ್ ಹರಿದುಹೋಗುವಂತೆ ಹಲ್ಲೆ ಮಾಡಲಾಗಿದೆ. ಜನಾಕ್ರೋಶಕ್ಕೆ ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್ ತತ್ತರ ಹೋಗಿದ್ದಾರೆ. ಇನ್ನು ಮಾಜಿ ಪ್ರಧಾನಿ ಶೇರ್ ಬಹುದ್ದೂರ್ ದೇವುಬಾ, ವಿದೇಶಾಂಗ ಮಂತ್ರಿ ಅರ್ಜುನ್ ರಾಣಾ ದೇವುಬಾ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್‌ರನ್ನ ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಪ್ರತಿಭಟನಾಕಾರರು ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. 29 ಸೆಕೆಂಡುಗಳ ವಿಡಿಯೋನಲ್ಲಿ ಬಿಷ್ಣು ಪ್ರಸಾದ್ ಜೀವ ಉಳಿಸಿಕೊಳ್ಳಲು ಓಡೋಡಿ ಹೋಗ್ತಿದ್ದ ದೃಶ್ಯ ಕಂಡುಬಂದಿದೆ. ಉದ್ರಿಕ್ತರು ಮನೆಗೆ ಮುತ್ತಿಗೆ ಹಾಕ್ತಿದ್ದಂತೆ ಸಚಿವರು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಕಾಂಪೌಂಡ್‌ನಿಂದ ಆಚೆ ಬರ್ತಿದ್ದಂತೆ ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಓಡ್ತಿದ್ದಂತೆ ಮತ್ತೊಬ್ಬ ಫಿಲ್ಮಿ ಸ್ಟೈಲ್‌ನಲ್ಲಿ ಜಂಪ್ ಮಾಡಿ ಜಾಡಿಸಿ ಒದ್ದಿದ್ದಾನೆ. ಬಳಿಕ ಅಲ್ಲೇ ಇದ್ದ ಮತ್ತೊಂದು ಗುಂಪು ಅವರನ್ನು ರಕ್ಷಣೆ ಮಾಡಿ ಕರೆದೊಯ್ದಿದೆ. ಈ ದೃಶ್ಯಗಳು 29 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ.