ಬೆಂಗಳೂರು: ಪತಿ ಅಂಬರೀಶ್ ಜನ್ಮದಿನದಂದು ಸುಮಲತಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘’ನಿಮ್ಮನ್ನ ನೆನಪಿಸಿಕೊಂಡಾಗಲೆಲ್ಲಾ ತುಟಿ ಅಂಚಲ್ಲಿ ಮಂದಹಾಸ ಮೂಡುತ್ತದೆ. ನಿಮ್ಮನ್ನ ಕಳೆದುಕೊಂಡ ನೋವು ನಮ್ಮಲ್ಲಿ ಸದಾ ಇರುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ಮತ್ತು ಎಂದೆಂದಿಗೂ ನೀವು ನಮ್ಮ ಜೀವನದ ಒಂದು ಭಾಗ. ನೀವು ಬದುಕನ್ನು ಮೀರಿದವರು. ನೀವೇ ನಮ್ಮ ಜೀವನ. ಸ್ವರ್ಗದಲ್ಲಿ ನಿಮಗೆ ಜನ್ಮದಿನದ ಶುಭಾಶಯಗಳು’’ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಅಂಬರೀಶ್ ಬರೆದುಕೊಂಡಿದ್ದಾರೆ.
ಹಾಗೇ, ‘’ಸ್ವರ್ಗದಲ್ಲಿ ನಿಮಗೆ ಜನ್ಮದಿನದ ಶುಭಾಶಯಗಳು. ಈದಿನ ನಿಮ್ಮೊಟ್ಟಿಗೆ ಹಲವು ವರ್ಷಗಳ ಕಾಲ ಹುಟ್ಟುಹಬ್ಬ ಆಚರಿಸಿದ ಸಂತಸ, ಕಣ್ಣೀರಿನ ನೆನಪುಗಳಿಂದ ತುಂಬಿದೆ. ನಿಮ್ಮನ್ನ ನಾನು ಯಾವಾಗಲೂ ಮಿಸ್ ಮಾಡಿಕೊಂಡರೂ, ನೀವು ತಂದ ಸಂತೋಷ ನನ್ನ ಹೃದಯದಲ್ಲಿ ಸದಾ ಇರುತ್ತದೆ. ನಿಮ್ಮ ನೆನಪು, ಸ್ಮರಣೆ ನನಗೆ ಎಷ್ಟು ಮುಖ್ಯ ಎಂಬುದನ್ನ ನೀವು ಎಲ್ಲಿ ವಿಶ್ರಾಂತಿ ಪಡೆಯುತ್ತಿದ್ದೀರೋ, ಅಲ್ಲಿಂದಲೇ ನೋಡುತ್ತಿದ್ದೀರಾ ಎಂದು ಭಾವಿಸುತ್ತೇನೆ. ನಾನು ಏನೇ ಮಾಡಿದರೂ, ನನ್ನೊಂದಿಗೆ ನೀವು ಇದ್ದೀರಾ ಅಂದುಕೊಳ್ಳುತ್ತೇನೆ. ಹೀಗಾಗಿ, ನಿಮ್ಮ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದೇನೆ. ಆದರೆ, ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೇನೆ. ಲವ್ ಯೂ.. ಫಾರೆವರ್’’ ಎಂದೂ ಸುಮಲತಾ ಅಂಬರೀಶ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಂದ್ಹಾಗೆ, 1952 ಮೇ 29 ರಂದು ದೊಡ್ಡರಸಿನಕೆರೆಯಲ್ಲಿ ಜನಿಸಿದವರು ಅಂಬರೀಶ್. ಇವರ ನಿಜವಾದ ಹೆಸರು ಅಮರನಾಥ್. ಹೀಗಾಗಿ, ತಮ್ಮ ಸೋಷಿಯಲ್ ಮೀಡಿಯಾದ ಹ್ಯಾಂಡಲ್‌ಗಳಲ್ಲಿ ಪತ್ನಿ ‘ಸುಮಲತಾ ಅಮರನಾಥ್’ ಎಂದೇ ಹಾಕಿಕೊಂಡಿದ್ದಾರೆ. ನವೆಂಬರ್ 24, 2018ರಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಅಂಬರೀಶ್ ಚಿರನಿದ್ರೆಗೆ ಜಾರಿದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


