ಉಡುಪಿಯಲ್ಲಿ ಮತ್ತೆ ಹೆಡೆ ಬಿಚ್ಚಿದ ಟೀಂ ಗರುಡ: ಕಾರ್‌ವಾರ್ ವಿಡಿಯೋ ಸಿಕ್ಕಾಪಟ್ಟೆ ವೈರಲ್

ಉಡುಪಿ: ಒಂದೇ ಗುಂಪಿನ ಎರಡು ತಂಡಗಳು ಪರಸ್ಪರ ಲಾಂಗ್, ಮಚ್ಚು ಬೀಸಿ ಬಡಿದಾಡಿಕೊಂಡ ಘಟನೆ ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಮೇ 18 ರ ಮುಂಜಾವ 2 ಗಂಟೆಯ ಹೊತ್ತಿಗೆ ಕುಂಜಿಬೆಟ್ಟು ರಸ್ತೆಯಲ್ಲಿ ಮುಖಾಮುಖಿಯಾದ ಎರಡು ತಂಡಗಳು ಈ ರೀತಿಯಾಗಿ ಕಾದಾಟ ನಡೆಸಿದೆ. ರಾತ್ರಿ ವೇಳೆ ಕಾರುಗಳ ಗುದ್ದಾಟ, ತಲವಾರು ಹಿಡಿದು ಬಡಿದಾಡುತ್ತಿರುವುದನ್ನು ಕಂಡು ಸುತ್ತಲಿನ ಫ್ಲ್ಯಾಟ್ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಉಡುಪಿಯ ಕಾಪುವಿನಲ್ಲಿ ಟೀಂ ಗರುಡ ಹೆಸರಿನಲ್ಲಿ ತಂಡ ಕಟ್ಟಿಕೊಂಡಿದ್ದ ಪುಂಡರ ಗುಂಪೊಂದು ಗಾಂಜಾ, ದನ ಕಳ್ಳತನ, ದರೋಡೆಯಲ್ಲಿ ಸಕ್ರಿಯವಾಗಿತ್ತು. ಸದಾ ತಲವಾರು, ಕತ್ತಿ, ಡ್ರ್ಯಾಗನ್ ಹಿಡಿದು ತಿರುಗಾಡುತ್ತಿದ್ದ ಈ ಗುಂಪಿಗೆ ರೌಡಿಶೀಟರ್ ಆಶಿಕ್ ಎಂಬಾತನೇ ಕ್ಯಾಪ್ಟನ್ ಆಗಿದ್ದ. ನಾಲ್ಕು ವರ್ಷದ ಹಿಂದೆ ಅಂದಿನ ಎಸ್.ಪಿ ಡಾ. ವಿಷ್ಣುವರ್ಧನ್ ಈ ತಂಡದ ಹೆಡೆಮುರಿ ಕಟ್ಟಿದ್ದರು. ಅದಾದ ನಂತರ ಈ ತಂಡದ ಒಳಜಗಳ ಹೆಚ್ಚಾಗಿತ್ತು.

ಎರಡು ವಾರದ ಹಿಂದೆ ಆಶಿಕ್ ಮತ್ತು ಅಲ್ಫಾಝ್ ನಡುವೆ ಜಗಳ ನಡೆದಿತ್ತು. ಒಂದೇ ತಂಡ ಆಗಿರುವುದರಿಂದ ರಾಜಿ ಆಗಲು ಆಶಿಕ್‌ನನ್ನು ಅಲ್ಫಾಝ್ ಟೀಂ ಕರೆಸಿಕೊಂಡಿತ್ತು. ಆದರೆ ಅಲ್ಫಾಝ್ ಬಗ್ಗೆ ತಿಳಿದಿದ್ದ ಆಶಿಕ್ ಕುಂಜಿಬೆಟ್ಟಿಗೆ ಬಂದವನೇ ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್‌ನನ್ನ ಮಟ್ಟ ಹಾಕಲು ಅಲ್ಫಾಝ್ ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ, ತಲವಾರು ದಾಳಿ ನಡೆಸಲು ಮುಂದಾಗಿದ್ದಾರೆ. ಇಷ್ಟಾಗುತ್ತಲೇ ಆಶಿಕ್ ಕಡೆಯವರು ತಮ್ಮ ಸ್ವಿಫ್ಟ್ ಕಾರನ್ನು ಶರೀಫ್ ಎಂಬಾತನ ಮೇಲೆ ಹರಿಸಿದ್ದಾರೆ.
ಈ ಘಟನೆ ಸಂಬಂಧ ಈಗಾಗಲೇ ಉಡುಪಿ ನಗರ ಪೊಲೀಸರು ಆಶಿಕ್ ಸಹಿತ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಇನ್ನೂ ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಘಟನೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




