
ಉಡುಪಿ: ಮಲ್ಪೆ ಸಮೀಪದ ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ಕಳೆದ ಸೋಮವಾರ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರು ಮೂಲದ ಯುವತಿ ದಿಶಾ (23) ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕಳೆದ ಸೋಮವಾರ ಡೆಲ್ಟಾ ಬೀಚ್‌ನ ಅಳಿವೆ ಬಾಗಿಲು ಪ್ರದೇಶದಲ್ಲಿ 14 ಮಂದಿ ಪ್ರವಾಸಿಗರಿದ್ದ ದೋಣಿಯು ಸಮುದ್ರದ ಭೀಕರ ಅಲೆಗಳಿಗೆ ಸಿಲುಕಿ ಮಗುಚಿ ಬಿದ್ದಿತ್ತು. ಈ ವೇಳೆ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ದಿಶಾ ಸೇರಿದಂತೆ ನಾಲ್ವರನ್ನು ತಕ್ಷಣವೇ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ನಿಗಾದಲ್ಲಿದ್ದ ದಿಶಾ ಇಂದು ಕೊನೆಯುಸಿರೆಳೆದಿದ್ದಾರೆ. ಈ ದುರಂತದಲ್ಲಿ ಈ ಮೊದಲೇ ಶಂಕರಪ್ಪ ಮತ್ತು ಸಿಂಧೂ ಎಂಬುವವರು ಮೃತಪಟ್ಟಿದ್ದರು.
ಮೃತ ದಿಶಾ ಅವರು ಕನ್ನಡದ ಖ್ಯಾತ ಯೂಟ್ಯೂಬರ್‌ಗಳಾದ ಮಧು ಗೌಡ ಮತ್ತು ನಿಶಾ ಅವರ ಆಪ್ತ ಗೆಳತಿಯಾಗಿದ್ದರು. ಅನೇಕ ವ್ಲಾಗ್‌ಗಳಲ್ಲಿ ಕಾಣಿಸಿಕೊಂಡಿದ್ದ ದಿಶಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮಧು ಗೌಡ ಮತ್ತು ನಿಶಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ನನ್ನ ಪ್ರೀತಿಯ ಗೆಳತಿಯನ್ನು ಕಳೆದುಕೊಂಡಿದ್ದೇನೆ, ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ನಿಯಮಗಳನ್ನು ಮೀರಿ ಪ್ರವಾಸಿಗರನ್ನು ಕರೆದೊಯ್ಯಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡೆಲ್ಟಾ ಬೀಚ್‌ನ ಅಳಿವೆ ಬಾಗಿಲು ಪ್ರದೇಶವು ಅಪಾಯಕಾರಿಯಾಗಿದ್ದರೂ, ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.




