ಉಡುಪಿ: ಕೋಡಿಬೆಂಗ್ರೆ ಸಮೀಪದ ಅಳಿವೆ ಬಾಗಿಲಿನಲ್ಲಿ ಪ್ರವಾಸಿಗರಿದ್ದ ಬೋಟ್ ಮಗುಚಿ ಬಿದ್ದ ಪರಿಣಾಮ, ಮೈಸೂರು ಮೂಲದ ಇಬ್ಬರು ಬಿಪಿಓ ಉದ್ಯೋಗಿಗಳು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮೈಸೂರಿನ ಸರಸ್ವತಿಪುರಂನಿಂದ ಬಿಪಿಓ ಕಾಲ್ ಸೆಂಟರ್‌ನ 28 ಉದ್ಯೋಗಿಗಳ ತಂಡ ಪ್ರವಾಸಕ್ಕೆಂದು ಉಡುಪಿಗೆ ಬಂದಿತ್ತು. ನಿನ್ನೆ ಮಧ್ಯಾಹ್ನ ಡೆಲ್ಟಾ ಬೀಚ್‌ನಿಂದ ಎರಡು ಬೋಟ್‌ಗಳಲ್ಲಿ ತಲಾ 14 ಮಂದಿಯಂತೆ ಸಮುದ್ರ ವಿಹಾರಕ್ಕೆ ತೆರಳಿದ್ದರು. ಬೋಟ್‌ಗಳು ಕೋಡಿಬೆಂಗ್ರೆ ಅಳಿವೆ ಬಾಗಿಲಿನ (ಸಮುದ್ರ ಮತ್ತು ನದಿ ಸೇರುವ ತಾಣ) ಬಳಿ ಸಂಚರಿಸುತ್ತಿದ್ದಾಗ, ಸಮುದ್ರದ ಭೀಕರ ಅಲೆಗಳಿಗೆ ಸಿಲುಕಿದ ಒಂದು ಬೋಟ್ ಅಚಾನಕ್ಕಾಗಿ ಮಗುಚಿ ಬಿದ್ದಿದೆ.
ಬೋಟ್ ಮಗುಚುತ್ತಿದ್ದಂತೆ ಪ್ರವಾಸಿಗರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಸ್ಥಳೀಯ ಮೀನುಗಾರರು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣ ಧಾವಿಸಿ ಎಲ್ಲರನ್ನೂ ದಡಕ್ಕೆ ತಂದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಶಂಕರಪ್ಪ (22) ಮತ್ತು ಸಿಂಧು (23) ಸಾವನ್ನಪ್ಪಿದ್ದಾರೆ. ಧರ್ಮರಾಜ್ ಹಾಗೂ ದಿಶಾ ಅವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಅವಘಡಕ್ಕೆ ಲೈಫ್ ಜಾಕೆಟ್ ಧರಿಸದಿರುವುದೇ ಮುಖ್ಯ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಬೋಟ್ ಸಿಬ್ಬಂದಿ ಲೈಫ್ ಜಾಕೆಟ್ ನೀಡಿದ್ದರೂ ಸಹ, ಕೆಲವು ಪ್ರವಾಸಿಗರು ಅದನ್ನು ಧರಿಸಿರಲಿಲ್ಲ ಎನ್ನಲಾಗಿದೆ.


